ಬೆಳಗಾವಿ : ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿ ಆಗಿ ಕರ್ತವ್ಯ ನಿರ್ವಹಿಸಿ ಅಂದು ಸಿಎಂ ಪದಕ ಪಡೆದಿದ್ದರೆ ಇಂದು ಅವರಿಂದ ಪ್ರೇರಣೆ ಪಡೆದು ಪೊಲೀಸ್ ಇಲಾಖೆಗೆ ಸೇರಿದ್ದ ಇವರು ಸಲ್ಲಿಸಿದ್ದ ಸೇವೆ ಗುರುತಿಸಿರುವ ಸರಕಾರ 2025 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ ಮಾಡಿದೆ.
ಕೆಎಸ್ಆರ್ ಪಿ ಯ ನಿವೃತ್ತ ಹೆಡ್ ಕಾನ್ಸ್‌ಟೇಬಲ್ ದಸ್ತಗಿರಸಾಬ್ ಮುಲ್ಲಾ ತಮ್ಮ ಸುದೀರ್ಘ ಸೇವೆಯನ್ನು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿ 2012 ರಲ್ಲಿ ಮುಖ್ಯಮಂತ್ರಿ ಪದಕ ಪಡೆದಿದ್ದರು. ಇಂದು ಅವರ ಪುತ್ರ ಹಸನಸಾಬ್ ಮುಲ್ಲಾ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು ತಂದೆಯಂತೆ ಮಗ ಕೂಡಾ ಪೊಲೀಸ್ ಇಲಾಖೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಸಧ್ಯ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದವರಾದ ದಸ್ತಗಿರಸಾಬ್ ಮುಲ್ಲಾ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಲೇ ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದರು. ಓರ್ವರು ವೈದ್ಯಕೀಯ ಪದವಿ ಪಡೆದು ಸಧ್ಯ ಬೆಳಗಾವಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೋರ್ವ ಪುತ್ರ ಹಸನಸಾಬ್ ಮುಲ್ಲಾ ಪೊಲೀಸ್ ವೃತ್ತಿಯನ್ನೇ ಆಯ್ಕೆಮಾಡಿಕೊಂಡು ತಂದೆಯ ಹಾದಿಯಲ್ಲಿ ಸಾಗಿದ್ದಾರೆ.
2007 ರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ವೃತ್ತಿ ಬದುಕು ಪ್ರಾರಂಭಿಸಿದ ಹಸನಸಾಬ್ ಮುಲ್ಲಾ ಅವರು ತಂದೆಯಿಂದಲೇ ಪ್ರೇರಣೆ ಹೊಂದಿ ಪೊಲೀಸ್ ಇಲಾಖೆ ಆಯ್ಕೆಮಾಡಿಕೊಂಡರು. ಖಡಕ್ ಅಧಿಕಾರಿ ಎಂದೇ ಖ್ಯಾತಿ ಹೊಂದಿರುವ ಇವರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಸಧ್ಯ ತಂದೆ ಕೆಲಸ ಮಾಡಿದ್ದ ಇಲಾಖೆಯಲ್ಲೇ ಉತ್ತಮ ಕರ್ತವ್ಯ ನಿರ್ವಹಿಸಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು ಇನ್ನೊಂದು ವಿಶೇಷ.
ಈ ಬಾರಿಯ ಮುಖ್ಯಮಂತ್ರಿ ಪದಕ್ಕೆ ಬೆಳಗಾವಿ ಜಿಲ್ಲಾ ಹಾಗೂ ನಗರ ಪೊಲೀಸ್ ವ್ಯಾಪ್ತಿಯಲ್ಲಿ 13 ಜನ ಪೊಲೀಸರು ಭಾಜನರಾಗಿದ್ದಾರೆ. ಪದಕ ಪಡೆದ ಪೊಲೀಸ್ ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಲಿದ್ದಾರೆ.