ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಿಂಹಿಣಿಯೊಂದು ಸೇರ್ಪಡೆಯಾಗಿದೆ. ಇನ್ಮುಂದೆ ಮೃಗಾಲಯಕ್ಕೆ ಬರುವ ಪ್ರವಾಸಿಗರು ಅದನ್ನು ಕಣ್ತುಂಬಿಕೊಳ್ಳಬಹುದು.
ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಈ ಸಿಂಹಿಣಿಯನ್ನು ಭಾನುವಾರ ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಲ್ಲಿರುವ ಕಿರು ಮೃಗಾಲಯಕ್ಕೆ ಕರೆತರಲಾಗಿದೆ. 9 ವರ್ಷದ ಈ ಸಿಂಹಿಣಿ ಹೆಸರು ಭೃಂಗಾ.
ಫೆಬ್ರುವರಿ 6ರಂದು ಚನ್ನಮ್ಮ ಮೃಗಾಲಯದಲ್ಲಿ ನಿರುಪಮಾ ಎಂಬ ಸಿಂಹಿಣಿ ಅನಾರೋಗ್ಯದಿಂದ ನಿಧನವಾಗಿತ್ತು. ಅದು ಮೃತಪಟ್ಟ ಬಳಿಕ ಇಲ್ಲಿನ ಕೃಷ್ಣಾ ಎಂಬ ಸಿಂಹ ಮಂಕಾಗಿತ್ತು. ಈಗ ಭೃಂಗಾ ಮೃಗಾಲಯ ಪ್ರವೇಶಿಸುತ್ತಿದ್ದಂತೆ ಕೃಷ್ಣಾ ಫುಲ್ ಅಲರ್ಟ್ ಆಗಿದ್ದು, ನನಗೆ ಜೋಡಿ ಸಿಕ್ಕಿತು ಎಂಬ ಖುಷಿಯಲ್ಲಿ ತೇಲಾಡುತ್ತಿದೆ.
ಈಟಿವಿ ಭಾರತ ಪ್ರತಿನಿಧಿ ವಲಯ ಅರಣ್ಯಾಧಿಕಾರಿ ಪವನ ಕುರನಿಂಗ ಅವರನ್ನು ಸಂಪರ್ಕಿಸಿದಾಗ, ಬನ್ನೇರುಘಟ್ಟದಿಂದ ಭಾನುವಾರ ಸಿಂಹಿಣಿ ಒಂದು ತಂದಿದ್ದೇವೆ. ಸದ್ಯಕ್ಕೆ ಕೆಲ ದಿನ ಕ್ವಾರಂಟೈನ್ ನಲ್ಲಿ ಅದನ್ನು ಇಡುತ್ತೇವೆ. ಕೃಷ್ಣಾ ಸಿಂಹದ ಜೊತೆಗೆ ಹೊಂದಾಣಿಕೆ ನೋಡಿಕೊಂಡು ಮೃಗಾಲಯದ ಆವರಣದಲ್ಲಿ ಭೃಂಗಾಳನ್ನು ಬಿಡುತ್ತೇವೆ. ಆಗ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.