Breaking News

ಕೊರೋನಾ ತಡೆಗೆ ಕೈಜೋಡಿಸಿ- ಡಿಸಿಎಂ ಕಾರಜೋಳ

ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ
————————————————————

ಬೆಳಗಾವಿ, ): ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆದಾಯ ಬರುತ್ತಿಲ್ಲ ಆದಾಗ್ಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಆಗಿರುವ ನಷ್ಟ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಮುಂಬರುವ ದಿನಗಳಲ್ಲಿ ಸರ್ಕಾರ ಅನೇಕ ಅಭಿವೃದ್ಧಿ ಕೆಲಸ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ‌‌‌ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.

ಲೋಕೋಪಯೋಗಿ ಇಲಾಖೆಯಿಂದ ನಿಪ್ಪಾಣಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರವಾಸಿ ಮಂದಿರ, ವಾಣಿಜ್ಯ ತೆರಿಗೆ ಇಲಾಖೆಯ ಕಟ್ಟಡ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಶನಿವಾರ(ಜು.11) ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಅಭಿವೃದ್ಧಿ ಕಾರ್ಯಕ್ರಮ ಮಾಡುವ ಉದ್ದೇಶ ಸರ್ಕಾರ ಹೊಂದಿತ್ತು. ಆದರೆ ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಆದರೂ ಕೋವಿಡ್-೧೯ ಜತೆಯಲ್ಲಿಯೇ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿವೆ.

ರಾಜ್ಯದಲ್ಲಿ ಪ್ರವಾಹದಿಂದ ೩೫ ಸಾವಿರ ಕೋಟಿ ಹಾನಿ ಆಗಿದೆ ಆ ನಷ್ಟವನ್ನು ತುಂಬಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಸಣ್ಣ ಕೈಗಾರಿಕೆಗಳು, ವ್ಯಾಪಾರಿಗಳಿಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ.

ಚಾಲಕರು, ಅಗಸರು, ಕ್ಷೌರಿಕರಿಗೆ ಹಾಗೂ ಅನೇಕ ವರ್ಗದ ಕಾರ್ಮಿಕರಿಗೆ, ರೈತರಿಗೆ ೫ ಸಾವಿರ ಸಹಾಯ ಹಣ ನೀಡುವ ಯೋಜನೆ ಸರ್ಕಾರ ಜಾರಿಗೆ ತಂದಿದೆ. ಪ್ರಾಥಮಿಕ, ಪ್ರೌಢಶಾಲಾ ಕಟ್ಟಡಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಬಡ ಮಕ್ಕಳಿಗಾಗಿ
೮೨೪ ವಸತಿ ಶಾಲೆಗಳು ರಾಜ್ಯಾದ್ಯಂತ ನಡೆಸುತ್ತಿದ್ದು, ಈ ವಸತಿ ಶಾಲೆಗಳಿಂದ ೪ ಲಕ್ಷ ಬಡ ಮಕ್ಕಳಿಗೆ ಅನುಕೂಲ ಆಗಲಿದೆ. ಕರ್ನಾಟಕ ಸರ್ಕಾರ ಶಿಕ್ಷಣದಲ್ಲಿ ಮಾಡಿದ ಕ್ರಾಂತಿ ದೇಶದಲ್ಲಿ ಬೇರೆ ಯಾವ ಸರ್ಕಾರವು ಮಾಡಿಲ್ಲ.

ಸಂಕಷ್ಟದಲ್ಲಿ ಸರ್ಕಾರ ಕೆಲಸ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಯಾರೂ ರಾಜಕೀಯ ಮಾಡದೇ ಕೋವಿಡ್-೧೯ ತಡೆಯಲು ಎಲ್ಲರೂ ಕೈಜೋಡಿಸಬೇಕು ಎಂದು ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ‌‌‌ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು ಮನವಿ ಮಾಡಿಕೊಂಡರು.

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮಾತನಾಡಿ, ನಿಪ್ಪಾಣಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿದ್ದು, ಅಂಬೇಡ್ಕರ್ ಭವನ ನಿರ್ಮಾಣ ಆಗಿರುವದರಿಂದ ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲ ಆಗಲಿದೆ. ಸಾರಿಗೆ ಇಲಾಖೆಯಿಂದ ನಿಪ್ಪಾಣಿ ಕ್ಷೇತ್ರದಲ್ಲಿ ಬೇಕಾಗುವ ಸೌಲಭ್ಯ ಒದಗಿಸಲು ಸರ್ಕಾರ ಸಿದ್ದ ವಿದೆ ಎಂದರು.

ಕೋವಿಡ್ -೧೯ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ಹಾನಿ ಆಗಿದೆ. ಬಸ್ ಗಳಲ್ಲಿ ಜನರು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ, ಇಲಾಖೆ ಹಾನಿಯಲ್ಲಿ ಇದ್ದರು ಸಹ ಸಾರಿಗೆ ಇಲಾಖೆಯಲ್ಲಿಯ ನೌಕರರಿಗೆ ಸಂಬಳ ಕಡಿತ ಗೊಳಿಸದೆ ನೌಕರರಿಗೆ ಸಂಬಳ ಮುಟ್ಟಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. ‌

ನಿಪ್ಪಾಣಿ ಹೊಸದಾಗಿ ತಾಲೂಕು ಎಂದು ಘೋಷಣೆ ಆಗಿದೆ.‌ ಈ ಹಿನ್ನೆಲೆಯಲ್ಲಿ ತಾಲೂಕಿಗೆ ಬೇಕಾಗುವ ಎಲ್ಲಾ ಇಲಾಖೆಯ ಕಚೇರಿಗಳನ್ನು ಸ್ಥಾಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದರು.

ಬಳಿಕ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು, ನಿಪ್ಪಾಣಿ ಒಂದು ಕಡೆ ಮಹಾರಾಷ್ಟ್ರ ಹಾಗೂ ಗೋವಾ ಗಡಿಯನ್ನು ಹೊಂದಿದೆ ಈ ಐತಿಹಾಸಿಕ ನಗರವು ಬೆಲ್ಲ, ಮೆಣಸಿನಕಾಯಿ ಹಾಗೂ ತಂಬಾಕು ಹೆಚ್ಚಾಗಿ ಉತ್ಪಾದನೆ ಮಾಡುವ ನಗರವಾಗಿದೆ. ಇಲ್ಲಿನ ಶಾಸಕಿಯಾಗಿ ಹಾಗೂ ಸಚಿವೆಯಾಗಿ ಸರ್ಕಾರದಿಂದ ಅನುದಾನವನ್ನು ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನವನ್ನು ಅರ್ಪಿಸಿ ಪುರುಷ ಹಾಗೂ ಮಹಿಳೆಯರಿಗೆ ಸಮಾನವಾದ ಅವಕಾಶ ನೀಡಿದ್ದಕ್ಕಾಗಿ ನಾನು ಇಂದು ಅಂಬೇಡ್ಕರ್ ಅವರ ಕೃಪೆಯಿಂದ ಸಚಿವೆ ಆಗಿದ್ದೇನೆ. ನಮ್ಮ ದೇಶದ ಸಂವಿಧಾನ ಇಡೀ ಜಗತ್ತಿಗೆ ಮಾದರಿ ಆಗಿದೆ. ಅಂಬೇಡ್ಕರ್ ಅವರ ಆದರ್ಶಗಳನ್ನು ಇಟ್ಟುಕೊಂಡು ಎಲ್ಲಾ ಸಮುದಾಯದವರಿಗೂ ಅಗತ್ಯವಿರುವ ಸಹಾಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದೇನೆ‌ ಎಂದು ಹೇಳಿದರು.

೨.೫ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ
ಹಾಗೂ ೨ ಕೋಟಿ ವೇಚ್ಚದಲ್ಲಿ ಪಟ್ಟಣದಲ್ಲಿ ನೂತನವಾಗಿ ಪ್ರವಾಸಿ ಮಂದರಿವನ್ನು ಸುಂದರವಾಗಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಮಿನಿ‌ ವಿಧಾನ ಸೌಧ ನಿರ್ಮಾಣ ಮಾಡುವುದಕ್ಕೆ ೫ ಎಕರೆ ಜಾಗ ಸರ್ಕಾರಕ್ಕೆ ಕೇಳಿದ್ದೇವೆ. ಅದೇ ರೀತಿ ಪಶು ಆಸ್ಪತ್ರೆಗೆ ೨ ಎಕರೆ ಜಾಗ ಕೇಳಿದ್ದೇವೆ. ಮತ್ತು ಬಸ್ ನಿಲ್ದಾಣ ಮೇಲ್ದರ್ಜೆಗೆ ಪ್ರಸ್ತಾಪ ಕಳುಹಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಸರಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ನಿಪ್ಪಾಣಿ ಇಂದು ಪ್ರತ್ಯೇಕವಾಗಿ ತಾಲೂಕು ಅಗಿದೆ. ಈ ಐತಿಹಾಸಿಕ ನಗರಕ್ಕೆ ಡಾ. ಅಂಬೇಡ್ಕರ್ ಅವರು ಭೇಟಿ ನೀಡಿದ್ದು ವಿಶೇಷವಾಗಿದ್ದು, ಈ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಆಗಿರುವುದು ಹೆಮ್ಮೆಯ ವಿಷಯ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ ಎಂದು ಹೇಳಿದರು. ‌

ಈ ವೇಳೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರರು ಉಪಸ್ಥಿತರಿದ್ದರು.
***

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *