ಬೆಂಗಳೂರು: ಇಸ್ರೋ ಮಾಜಿ ಮುಖ್ಯಸ್ಥ, ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ‘ಪದ್ಮವಿಭೂಷಣ’ ಪ್ರಶಸ್ತಿ ಪುರಸ್ಕೃತ ಡಾ.ಕೆ.ಕಸ್ತೂರಿರಂಗನ್ (84) ಅವರು ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಭಾನುವಾರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕಸ್ತೂರಿರಂಗನ್ 1994ರಿಂದ 2003ರ ಅವಧಿಯಲ್ಲಿ 9 ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಇಸ್ರೋ ಹಲವು ಸಾಧನೆಗಳನ್ನು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತದ ಪ್ರತಿಷ್ಠಿತ ಉಡಾವಣಾ ವಾಹನವಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯಶಸ್ವಿ ಉಡಾವಣೆಯ ಜೊತೆಗೆ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ)ನ ಮೊದಲ ಯಶಸ್ವಿ ಹಾರಾಟ ಪರೀಕ್ಷೆಯೂ ಸೇರಿದಂತೆ ಹಲವಾರು ಪ್ರಮುಖ ಮೈಲಿಗಲ್ಲುಗಳಿಗೆ ಇವರು ಸಾಕ್ಷಿಯಾಗಿದ್ದರು.