ಬೆಳಗಾವಿ- ಬೆಳಗಾವಿಯ ಪೀರನವಾಡಿ,ರಾಯಣ್ಣನ ಮೂರ್ತಿ ಈಗ ಸೆಲ್ಫೀ ಸ್ಪಾಟ್ ಆಗಿಬಿಟ್ಟಿದೆ.ದಿನನಿತ್ಯ ನೂರಾರು ಜನ ಅಲ್ಲಿಗೆ ಬಂದು ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ ಎಂದು ಘೋಷಣೆ ಕೂಗಿ,ಸೆಲ್ಫಿ ತೆಗೆಸಿಕೊಂಡು,ಅಲ್ಲಿಂದಲೇ ಫೇಸ್ ಬುಕ್ ಗೆ ಪೋಸ್ಟ್ ಮಾಡುವದು ಸಾಮಾನ್ಯವಾಗಿದೆ.
ಪೀರಣವಾಡಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕೇವಲ ಹೋರಾಟಗಾರರು,ಮಂತ್ರಿಗಳು,ಲೀಡರ್ ಗಳು ಹೂವಿನ ಹಾರ ಹಾಕುತ್ತಿದ್ದಾರೆ,ಜೊತೆಗೆ ಈ ದಾರಿಯಿಂದ ಸಾಗುವ ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಿ ಕ್ರಾಂತಿಪುರುಷನ ಪ್ರತಿಮೆಗೆ ಕೈ ಮುಗಿದು,ಮುಂದಕ್ಕೆ ಸಾಗುತ್ತಿದ್ದಾರೆ. ಮೋಬೈಲ್ ನಲ್ಲಿ ಪೋಟೋ ಕ್ಲಿಕ್ ಮಾಡಿ ಸೆಲ್ಫಿ ತಗೊಂಡು ಹೋಗುತ್ತಿರುವ ದೃಶ್ಯ ಇಲ್ಲಿ ಈಗ ಖಾಯಂ ನೋಡಲು ಸಿಗುತ್ತದೆ.
ದಿನನಿತ್ಯ ನೂರಾರು ಅಭಿಮಾನಿಗಳು,ಹತ್ತು ಹಲವು ಸಂಘಟನೆಗಳ ನಾಯಕರು,ಪೀರನವಾಡಿಗೆ ಆಗಮಿಸಿ ಕ್ರಾಂತಿಪುರುಷ,ರಾಯಣ್ಣನಿಗೆ ಗೌರವ ಸಮರ್ಪಿಸುವದು,ದಿನನಿತ್ಯ ನಡದೇ ಇದೆ.
ಕೆಲವರು ವಿಜಯ ಯಾತ್ರೆಯ ಮೂಲಕ ಪೀರನಾಡಿಗೆ,ಇನ್ನೂ ಕೆಲವರು ಸಂಕಲ್ಪ ಯಾತ್ರೆ,ಮತ್ತೊಬ್ಬರು ಪುಷ್ಪ ನಮನ ಎಂಬ ಹೆಸರಿನಲ್ಲಿ ಪೀರನವಾಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ರಾಯಣ್ಣನ ಮೂರ್ತಿಯ ದರ್ಶನ ಪಡೆದಿದ್ದಾರೆ.ಇಲ್ಲಿಯ ಇನ್ನೊಂದು ವಿಶೇಷತೆ ಏನೆಂದರೆ,ರಾಯಣ್ಣನ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೂ ಗೌರವ ಸಲ್ಲಿಸಿ,ಭಾಷಾ ಬಾಂಧವ್ಯದ ಸಂದೇಶ ಸಾರಿ,ಮಾದರಿಯಾಗಿದ್ದಾರೆ.
ಪೀರನವಾಡಿಯ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ ಪೀರನವಾಡಿ ಜಂಕ್ಷನ್ ಈಗ ಫುಲ್ ರಶ್,ಆಂದೋಲನದ ಸ್ವರೂಪದಲ್ಲಿ ಅಭಿಮಾನಿಗಳು ಮುಗಿಲು ಮುಟ್ಟುವ ಜಯಘೋಷಗಳೊಂದಿಗೆ ಇಲ್ಲಿಗೆ ಬಂದು ಗೌರವ ಸಮರ್ಪಿಸುತ್ತಿದ್ದಾರೆ.
ಈಗ ಹೊಸ ಡಿಮ್ಯಾಂಡ್….!
ಪೀರನವಾಡಿ ಮೂರ್ತಿ ವಿವಾದ ಸುಖಾಂತ್ಯಗೊಂಡ ಬೆನ್ನಲ್ಲೇ ಮೂಡಲಗಿಯಿಂದ ಖಾನಾಪುರ ತಾಲೂಕಿನ ನಂದಗಡ ಗ್ರಾಮದವರೆಗೆ ಬೃಹತ್ ಸಂಕಲ್ಪ ಯಾತ್ರೆ ಕೈಗೊಂಡ ವಿವಿಧ ಸಂಘಟನೆಗಳು ಮುಂದಿನ ಚಳಿಗಾಲದ ಅಧಿವೇಶನದೊಳಗಾಗಿ ಸುವರ್ಣಸೌಧದ ಎದುರು ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಹೊಸ ಡಿಮ್ಯಾಂಡ್ ಮಂಡಿಸಿದ್ದಾರೆ.
ಮೂಡಲಗಿಯ ಶ್ರೀಮಂತ ಶಿವಯೋಗಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಲಖನ್ ಸಂಸುದ್ದಿ, ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ನೇತೃತ್ವದಲ್ಲಿ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿತ್ತು. ಮೂಡಲಗಿಯಿಂದ ಬೆಳಗಾವಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಇದೇ ವೇಳೆ ಮಾತನಾಡಿದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 145 ಕೋಟಿ ಅನುದಾನ ಘೋಷಣೆಯಾಗಿ ಹಣಕಾಸು ಇಲಾಖೆಯಿಂದ ಅನುಮೋದನೆಗೊಂಡರು ಈವರೆಗೂ ನಯಾಪೈಸೆ ಬಿಡುಗಡೆಯಾಗಿಲ್ಲ. ಹೀಗಾಗಿ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕೆಲಸವಾಗಬೇಕು. ಹೀಗಾಗಿ ಕೂಡಲೇ ಅನುದಾನ ಬಿಡುಗಡೆ ಮಾಡಿ ಅಗತ್ಯ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದರು. ಇನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಮಾತನಾಡಿ, 500 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸುವರ್ಣಸೌಧ ಪಾಚಿಗಟ್ಟುತ್ತಿದೆ. ಹೀಗಾಗಿ ರಾಜ್ಯಮಟ್ಟದ ಇಲಾಖೆಗಳ ಕಚೇರಿ ಸ್ಥಳಾಂತರ ಆಗಬೇಕು. ಸುವರ್ಣಸೌಧದಲ್ಲಿ ಸೂಕ್ತ ನಿರ್ವಹಣೆ ಕಾರ್ಯ ನಡೆಯಬೇಕು. ಮುಂದಿನ ಚಳಿಗಾಲದ ಅಧಿವೇಶನದೊಳಗೆ ಸುವರ್ಣಸೌಧ ಎದುರು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸುವಂತೆ ಆಗ್ರಹಿಸಿದರು.