ಬೆಳಗಾವಿ,-ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ (ಸೆ.14) ನಡೆದ ಬೆಳಗಾವಿ ವಿಭಾಗಮಟ್ಟದ ಬೆಳೆ ಸಮೀಕ್ಷೆ ಕಾರ್ಯ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಆಧಾರಿತವಾಗಿ ರೈತರೇ ಸ್ವಯಂ ನಡೆಸುವ ಬೆಳೆ ಸಮೀಕ್ಷೆ ಕಾರ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಇದುವರೆಗೆ ಅತ್ಯುತ್ತಮ ಸ್ಪಂದನೆ ದೊರೆತಿದೆ. ರಾಜ್ಯದಾದ್ಯಂತ 78 ಲಕ್ಷ ರೈತರು ಈಗಾಗಲೇ ಸ್ವತಃ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಕೆಲವು ಕರಾವಳಿ ಜಿಲ್ಲೆಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಬೆಳೆ ಸಮೀಕ್ಷೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದೆ.
ಮುಂಬರಲಿರುವ ದಿನಗಳಲ್ಲಿ ರೈತರೇ ಸ್ವಯಂ ತಮ್ಮ ಬೆಳೆಗಳ ಸಮೀಕ್ಷೆ ಮಾಡಲಿದ್ದಾರೆ. ಬೆಳೆ ಸಮೀಕ್ಷೆ ಆಪ್ ಅನ್ನು ಇಡೀ ದೇಶಕ್ಕೆ ವಿಸ್ತರಣೆ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವರು ಭರವಸೆ ನೀಡಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಬೆಳೆವಿಮೆ ಪಾವತಿ ಕಡ್ಡಾಯಗೊಳಿಸಿ:
ರೈತರು ಕೇವಲ ಶೇ.2ರಷ್ಟು ಮಾತ್ರ ವಿಮೆ ಹಣ ಪಾವತಿಸಬೇಕು. ಉಳಿದ ಶೇ.98 ಸರಕಾರವೇ ಪಾವತಿಸುವುದರಿಂದ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಬೆಳೆವಿಮೆ ಪಾವತಿಸುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಚಿವ ಪಾಟೀಲ ಸೂಚನೆ ನೀಡಿದರು.
ಜಿಲ್ಲಾವಾರು ಮಳೆ, ಬಿತ್ತನೆ, ಗೊಬ್ಬರ ಪೂರೈಕೆ ಹಾಗೂ ಲಭ್ಯತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಮಣ್ಣಿನ ಗುಣಮಟ್ಟ ಅರಿತುಕೊಂಡರೆ ಕೃಷಿ ಸಮಸ್ಯೆಗಳನ್ನು ಪರಿಹರಿಸಬಹುದು. ಆದ್ದರಿಂದ ಮಣ್ಣು ಪರೀಕ್ಷೆಗೆ ಆದ್ಯತೆ ನೀಡಬೇಕು ಎಂದು ಸಚಿವ ಬಿ.ಸಿ.ಪಾಟೀಲ ನಿರ್ದೇಶನ ನೀಡಿದರು.
ರೈತರ ಆದಾಯ ದ್ವಿಗುಣಗೊಳಿಸಬೇಕಾದರೆ ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸಲು ಪ್ರೋತ್ಸಾಹಿಸಬೇಕು. ಅದೇ ರೀತಿ ರೈತ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವ ರೂಢಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಮುಂದಿನ ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ವಿಧಾನಸಭೆಯ ಉಪ ಸಭಾಧ್ಯಕ್ಷ ಆನಂದ ಮಾಮನಿ, “ಜಿಲ್ಲೆಯಲ್ಲಿ ಹೆಸರು ಸಂಪೂರ್ಣ ನಾಶವಾಗಿದ್ದು, ಹತ್ತಿ ಕೂಡ ಹಾನಿಗೊಳಗಾಗುತ್ತಿದೆ. ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಬೆಳೆವಿಮೆ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು” ಎಂದು ಸೂಚನೆ ನೀಡಿದರು.
2008 ರಿಂದ ಬೆಳೆವಿಮೆಯ ವ್ಯತ್ಯಾಸ ಆಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಚರ್ಚೆ ನಡೆಸಿದಾಗ್ಯೂ ಇದುವರೆಗೆ ಸರಿಪಡಿಸುವುದು ಸಾಧ್ಯವಾಗಿಲ್ಲ ಎಂದರು.
ಬೆಳೆವಿಮೆ ಪರಿಹಾರ ವ್ಯತ್ಯಾಸ ಸರಿಪಡಿಸಲು ಹವಾಮಾನ ಆಧಾರಿತವಾಗಿ ಪರಿಹಾರ ಮೊತ್ತವನ್ನು ನಿಗದಿಪಡಿಸಿ ವ್ಯತ್ಯಾಸ ಸರಿಪಡಿಸಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಸಚಿವ ಬಿ.ಸಿ.ಪಾಟೀಲ ನಿರ್ದೇಶನ ನೀಡಿದರು.
ಕಿತ್ತೂರು ಶಾಸಕರಾದ ಮಹಾಂತೇಶ ದೊಡಗೌಡ್ರ, ಫೆಡರೇಶನ್ ಹಾಗೂ ಇಲಾಖೆಯ ನಡುವೆ ಸಮನ್ವಯ ಸಾಧಿಸಿದರೆ ಯೂರಿಯಾ ಸಮರ್ಪಕ ವಿತರಣೆ ಸಾಧ್ಯವಾಗಲಿದೆ. ಆದ್ದರಿಂದ ಮುಂದಿನ ವರ್ಷಗಳಲ್ಲಿ ಸಮನ್ವಯತೆ ಸಾಧಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಿತ್ತೂರು ತಾಲ್ಲೂಕಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆ ಹಾಗೂ ಅಗತ್ಯ ಅನುದಾನವನ್ನು ತಕ್ಷಣವೇ ಮಂಜೂರು ಮಾಡಬೇಕು ಎಂದು ದೊಡಗೌಡ್ರ ಅವರು ಸಚಿವರಿಗೆ ಮನವಿ ಮಾಡಿಕೊಂಡರು.
ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಭಾಷೆಯ ಸಮಸ್ಯೆ ನೆಪದಲ್ಲಿ ಗುರಿಸಾಧನೆ ಕುಂಠಿತಗೊಳ್ಳಬಾರದು. ಆದ್ದರಿಂದ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಭಾಷಾ ಸಮಸ್ಯೆ ಬಗೆಹರಿಸಿ ಆದಷ್ಟು ಬೇಗನೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ರೈತರನ್ನು ವಂಚಿಸುವ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕವಟಗಿಮಠ ಒತ್ತಾಯಿಸಿದರು.
ಶಾಸಕ ಅನಿಲ್ ಬೆನಕೆ, ರೈತರಲ್ಲಿ ಕೆಲವರಿಗೆ ಆಂಡ್ರಾಯ್ಡ್ ಮೊಬೈಲ್ ಇಲ್ಲದಿರುವುದರಿಂದ ಬೆಳೆ ಸಮೀಕ್ಷೆಯಲ್ಲಿ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ನಿರ್ದೇಶಕರಾದ ಬಿ.ವೈ.ಶ್ರೀನಿವಾಸ್, ರೈತರಿಗೆ ಎದುರಾಗುವ ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ತಕ್ಷಣವೇ ನಿವಾರಿಸಲು ಅನುಕೂಲವಾಗುವಂತೆ ಈಗಾಗಲೇ ಮೂರು ವಿಭಾಗಮಟ್ಟದ ಸಭೆಗಳನ್ನು ನಡೆಸಲಾಗಿದೆ. ಸಚಿವರ ಆಶಯದಂತೆ ಬೆಳೆ ಸಮೀಕ್ಷೆ ಕಾರ್ಯ ಒಂದು ಉತ್ಸವದ ರೂಪದಲ್ಲಿ ನಡೆಸಲು ಇಲಾಖೆ ಮುಂದಾಗಿದೆ ಎಂದರು.
ಈಗಾಗಲೇ ವಿತರಿಸಲಾದ ರಸಗೊಬ್ಬರದ ಪ್ರಮಾಣವನ್ನು ಕೂಡ ದಾಸ್ತಾನು ಇರುವುದಾಗಿ ತೋರಿಸಿದರೆ ಕೇಂದ್ರದಿಂದ ಗೊಬ್ಬರ ಹಂಚಿಕೆ ಮಾಡುವುದಿಲ್ಲ. ಆದ್ದರಿಂದ ರೈತರಿಗೆ ಈಗಾಗಲೇ ವಿತರಣೆಯಾಗಿರುವ ಗೊಬ್ಬರದ ವಾಸ್ತವ ಪ್ರಮಾಣದ ವರದಿಯನ್ನು ಎರಡು ದಿನಗಳಲ್ಲಿ ನೀಡಬೇಕು ಎಂದು ಶ್ರೀನಿವಾಸ್ ಸೂಚನೆ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ 14822566 ಪ್ಲಾಟ್ ಗಳ ಸಮೀಕ್ಷೆ ಆಗಬೇಕಿದ್ದು, 600277 ಪ್ಲಾಟ್ ಗಳ ಸಮೀಕ್ಷೆಯಾಗಿದ್ದು, ಇಲ್ಲಿಯವರೆಗೆ ಶೇ.40.49 ರಷ್ಟು ಪ್ರಗತಿಯಾಗಿರುತ್ತದೆ ಎಂದು ಬೆಳಗಾವಿ ಜಿಲ್ಲೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ವಿವರಿಸಿದರು.
ನರೇಗಾ ಹಾಗೂ ಜಲಾಮೃತ ಯೋಜನೆಯಡಿ ಬೆಳಗಾವಿ ಜಿಲ್ಲೆ ಅತ್ಯುತ್ತಮ ಕೆಲಸ ಮಾಡಿದೆ ಎಂದು ಕೃಷಿ ಉಪನಿರ್ದೇಶಕ ಡಾ.ಎಚ್.ಡಿ.ಕೋಳೇಕರ ವಿವರಿಸಿದರು.
ಕೃಷಿ ಜ್ಞಾನ ಆಪ್ ಬಿಡುಗಡೆ:
ರೈತರಿಗೆ ಬೇಸಾಯ ಕ್ರಮಗಳು, ಬೆಳೆಗೆ ತಗಲುವ ವಿವಿಧ ರೋಗಗಳ ನಿಯಂತ್ರಣ, ಔಷಧಿ ಸಿಂಪರಣೆ ಸೇರಿದಂತೆ ವಿವಿಧ ಬಗೆಯ ಧ್ವನಿ ಹಾಗೂ ದೃಶ್ಯ ಆಧಾರಿತ ಮಾಹಿತಿಯನ್ನು ನೀಡುವ ವಿಶೇಷ “ಕೃಷಿ ಜ್ಞಾನ ಆಪ್” ಅನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ರೈತರು ತಮ್ಮ ಸಮಸ್ಯೆಗಳು ಮತ್ತು ಸವಾಲುಗಳಿಗೆ ಕೃಷಿ ತಜ್ಞರ ಮೂಲಕ ಸಲಹೆಗಳನ್ನು ಪಡೆಯಬಹುದು ಎಂದು ಸಚಿವರು ವಿವರಿಸಿದರು.
ಜಿಲ್ಲೆಯ ಕೃಷಿಯ ಸಮಗ್ರ ವಿವರಗಳನ್ನು ಹೊಂದಿರುವ ಕೃಷಿ ಜ್ಞಾನ ಆಪ್ ನಲ್ಲಿ ರೈತರು ಕಾಲ ಕಾಲಕ್ಕೆ ಎದುರಾಗುವ ಸಮಸ್ಯೆಗಳು ಮತ್ತು ನಿವಾರಣೋಪಾಯಗಳ ಕುರಿತು ಕಿರು ವಿಡಿಯೋ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಇದೇ ರೀತಿ ಉಳಿದ ಜಿಲ್ಲೆಗಳಲ್ಲೂ ಆಪ್ ಅಭಿವೃದ್ಧಿಪಡಿಸುವಂತೆ ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಎಂ.ಬಿ.ಚಿಟ್ಟಿ,
ಕೃಷಿ ಇಲಾಖೆಯ ಅಪರ ನಿರ್ದೇಶಕರಾದ ದಿವಾಕರ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸ್ವಾಗತಿಸಿದರು.
ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
***