Home / Breaking News / ಹಿಂದಿ ಸಾಪ್ತಾಹ ಬೇಡವೇ ಬೇಡ ಎಂದ,ಕನ್ನಡದ ಮಂದಿ….!

ಹಿಂದಿ ಸಾಪ್ತಾಹ ಬೇಡವೇ ಬೇಡ ಎಂದ,ಕನ್ನಡದ ಮಂದಿ….!

ಬೆಳಗಾವಿ-ಭಾರತದ ಭಾಷಾನೀತಿಯನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ,ಬೆಳಗಾವಿಯಲ್ಲಿ ಕರವೇ ಕರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಬೆಳಗಾವಿಯ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಹಿಂದಿ ದಿವಸ್ ಗೆ ತೀವ್ರ ಆಕ್ಷೇಪ ವ್ಯೆಕ್ತ ಪಡಿಸಿದರು

ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯ ಸಾರಾಂಶ

ಕರ್ನಾಟಕದ ಅತಿ ದೊಡ್ಡ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯು ಕಳೆದ ಇಪ್ಪತ್ತೊಂದು ವರ್ಷಗಳಿಂದ ನಾಡು ನುಡಿ ಗಡಿ ಜಲ ರಕ್ಷಣೆಯ ಕುರಿತ ಚಳವಳಿಗಳನ್ನು ಸಂಘಟಿಸುತ್ತ ಬರುತ್ತಿದೆ. ಕರ್ನಾಟಕವು ಕ್ರಾಂತಿಯೋಗಿ ಬಸವಣ್ಣನವರ ನಾಡು. ಶಾಂತಿ ಸಹಿಷ್ಣುತೆ ಸಹಬಾಳ್ವೆ ಸಮಾನತೆಯ ಸಂದೇಶಗಳನ್ನು ಸದಾ ದೇಶಕ್ಕೆ ನೀಡುತ್ತ ಬಂದಿರುವ ಪ್ರಗತಿಪರ ರಾಜ್ಯ. ನಮ್ಮ ನಾಡ ಭಾಷೆ ಕನ್ನಡ. ಕನ್ನಡಿಗರು ಹೆಮ್ಮೆಯ ಭಾರತೀಯರಾಗಿ ಎಲ್ಲ ಕ್ಷೇತ್ರಗಳನ್ನೂ ದುಡಿಯುತ್ತ ದೇಶದ ಒಳಿತಿಗಾಗಿ ದುಡಿಯುತ್ತ ಬಂದಿದ್ದಾರೆ.

ಒಕ್ಕೂಟ ಸರ್ಕಾರವು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿರುವುದು ದೇಶದ ಇತರ ಭಾಷೆಗಳಿಗೆ, ಭಾಷಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಭಾರತ ಬಹುಭಾಷೆ, ಸಂಸ್ಕೃತಿ, ಧರ್ಮಗಳ ನಾಡು. ಈ ಬಹುತ್ವ ಉಳಿದರಷ್ಟೇ ಒಕ್ಕೂಟ ಉಳಿಯಲು ಸಾಧ್ಯ. ಒಕ್ಕೂಟ ವ್ಯವಸ್ಥೆಯ ಈ ಮೂಲಮಂತ್ರವನ್ನೇ ನಮ್ಮ ಸಂವಿಧಾನವು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಹಿಂದೀ ಭಾಷೆಯೊಂದಕ್ಕೆ ಮಾತ್ರಾ ಉಳಿದ ಭಾಷೆಗಳಿಗಿಂತ ಮೇಲಿನ ಸ್ಥಾನ ನೀಡಿ, ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಎಲ್ಲಾ ಹಿಂದೀಯೇತರ ಜನಗಳ ಮೇಲೆ ಹೇರಿಕೆ ಮಾಡುತ್ತಿರುವುದು ತಕ್ಷಣದಿಂದಲೇ ನಿಲ್ಲಬೇಕಾದ ಆದ್ಯತೆಯ ವಿಷಯವಾಗಿದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದಲೂ ಕರ್ನಾಟಕ ರಕ್ಷಣಾ ವೇದಿಕೆ ಈ ಅಸಮಾನತೆಯ ಭಾಷಾನೀತಿಯ ವಿರುದ್ಧ ಹೋರಾಡುತ್ತಲೇ ಬಂದಿದೆ.

ಭಾರತಕ್ಕೆ ಯಾವುದೇ ಒಂದು ರಾಷ್ಟ್ರಭಾಷೆ ಇರುವುದಿಲ್ಲ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೆ, ಅದು ಸಂವಿಧಾನವೇ ಹೇಳುವ ಸಮಾನತೆಯ ತತ್ತ್ವಗಳಿಗೆ ವಿರುದ್ಧವಾಗಿರುತ್ತದೆ. ಆದರೆ ಅಧಿಕೃತ ಭಾಷಾ ಕಾಯ್ದೆಯ ಹೆಸರಿನಲ್ಲಿ ಹಿಂದಿಯೇತರ ಭಾರತೀಯರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮಗಳು ಸಂವಿಧಾನ ಜಾರಿಯಾದಂದಿನಿಂದಲೂ ನಡೆದುಕೊಂಡು ಬಂದಿವೆ. ತಮ್ಮ ಸರ್ಕಾರದ ಅವಧಿಯಲ್ಲೂ ಇದು ಮುಂದುವರೆದಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಂದಿ ದಿವಸ, ಹಿಂದಿ ಸಪ್ತಾಪ, ಹಿಂದಿ ಪಕ್ವಾಡದ ಹೆಸರಿನಲ್ಲಿ ಭಾರತದ ತೆರಿಗೆದಾರರ ಹಣದಿಂದ ಹಿಂದಿಯೇತರ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಸಮಾನಸ್ಥಾನಮಾನ ಇರಬೇಕು. ಆದರೆ ಕೇಂದ್ರಸರ್ಕಾರದ ನೀತಿ ಇಡೀ ದೇಶದ ತುಂಬೆಲ್ಲ ಒಂದೇ ಭಾಷೆ ಇರಬೇಕು ಎಂಬಂತೆ ಕಾಣುತ್ತಿದೆ. ಈ ನೀತಿಯಿಂದಾಗಿ ಈ ದೇಶದ ಭಾಷಾ ವೈವಿಧ್ಯಕ್ಕೆ ಧಕ್ಕೆಯಾಗುತ್ತದೆ. ದೇಶದ ಎಲ್ಲ ಭಾಷೆಗಳೂ ಜೀವಂತವಾಗಿರಬೇಕು, ಎಲ್ಲ ಭಾಷೆಗಳೂ ಬೆಳೆಯಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. ಹಿಂದಿಯೂ ಸಹ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಒರಿಯಾ, ಅಸ್ಸಾಮಿ, ಪಂಜಾಬಿ ಭಾಷೆಗಳ ಹಾಗೆ ಒಂದು ಭಾಷೆಯಾಗಿದೆ.

ಜಗತ್ತಿನ ನಾನಾ ದೇಶಗಳಲ್ಲಿ ಒಂದು ಭಾಷೆಯನ್ನು ಬೆಳೆಸಲು ಹೊರಟು, ಉಳಿದ ಭಾಷೆಗಳನ್ನು ಕಡೆಗಣಿಸಿದ ಪರಿಣಾಮವಾಗಿ ಜನರು ಬಂಡೆದ್ದು ಹೋರಾಟ ನಡೆಸಿದ ಇತಿಹಾಸವನ್ನು ತಾವು ದಯವಿಟ್ಟು ಗಮನಿಸಬೇಕು. ಪಾಕಿಸ್ತಾನ ವಿಭಜನೆಗೊಂಡು ಬಾಂಗ್ಲಾದೇಶ ಸ್ಥಾಪನೆಯಾಗಲು ಕೂಡ ಬಂಗಾಳಿಗಳ ಮೇಲೆ ಉರ್ದುಭಾಷೆಯನ್ನು ಹೇರಲು ಪ್ರಯತ್ನಿಸಿದ್ದೇ ಮೂಲ ಕಾರಣವಾಗಿತ್ತು ಎಂಬುದನ್ನು ತಾವು ಮರೆಯಬಾರದು. ಒಂದು ಭಾಷೆಯನ್ನು ಹೇರುತ್ತ, ಇತರ ಭಾಷೆಗಳನ್ನು ನಿರ್ಲಕ್ಷಿಸುವುದು ಆಯಾ ಜನಸಮುದಾಯದ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಭಾಷಾವಾರು ಪ್ರಾಂತ್ಯ ವಿಂಗಡಣೆ ನಡೆದಿದ್ದು ಕೂಡ, ಇಂಥ ಅಸಮಾನತೆಗಳನ್ನು ತಡೆಗಟ್ಟಲು ಎಂಬುದನ್ನು ತಾವು ಗಮನಿಸಬೇಕು. ಕೇಂದ್ರಸರ್ಕಾರದ ಹಿಂದಿಪರವಾದ ನೀತಿಗಳಿಂದಾಗಿ, ಹಿಂದಿ ಭಾಷಿಕರು ಇತರ ಭಾಷಿಕರಿಗಿಂತ ಶಿಕ್ಷಣ, ಉದ್ಯೋಗದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಆದ್ಯತೆ, ಅವಕಾಶಗಳನ್ನು ಪಡೆಯುತ್ತಿದ್ದಾರೆ. ಹಿಂದಿ ಭಾಷಿಕರು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಿದರೆ ಅವರಿಗೆ ಕೇಂದ್ರಸರ್ಕಾರದ ಎಲ್ಲ ಸೇವೆಗಳೂ ಹಿಂದಿ ಭಾಷೆಯಲ್ಲೇ ಸಿಗುತ್ತವೆ. ಆದರೆ ಒಬ್ಬ ಕನ್ನಡಿಗ, ಒಬ್ಬ ಮಲಯಾಳಿ ಅಥವಾ ಇನ್ಯಾವುದೇ ಭಾಷೆಗಳ ಜನರಿಗೆ ಬೇರೆ ರಾಜ್ಯಗಳಲ್ಲಿ ತಮ್ಮ ಭಾಷೆಗಳಲ್ಲಿ ಸೇವೆ ಲಭಿಸುವುದಿಲ್ಲ. ಇಂಥ ತಾರತಮ್ಯಗಳು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತ ಬರುತ್ತವೆ ಎಂಬುದನ್ನು ತಾವು ಗಮನಿಸಬೇಕಿದೆ. ಕೇಂದ್ರಸರ್ಕಾರದ ಅಸಮಾನತೆಯ ಭಾಷಾನೀತಿಯಿಂದಾಗಿ ಈ ಬಗೆಯ ತಾರತಮ್ಯ ನಡೆದುಕೊಂಡುಬಂದಿದೆ. ಇದರ ವಿರುದ್ಧ ಮೊದಲಿನಿಂದಲೂ ಹಲವು ರಾಜ್ಯಗಳ ಜನರು ವಿಶೇಷವಾಗಿ ದಕ್ಷಿಣ ಭಾರತೀಯರು ಪ್ರತಿಭಟಿಸುತ್ತಲೇ ಬಂದಿದ್ದೇವೆ.

ಈ ಅಸಮಾನತೆಯನ್ನು ತೊಡೆದು ಹಾಕಿ, ಸಮಾನತೆಯನ್ನು ಎತ್ತಿ ಹಿಡಿಯಲು ತಮ್ಮ ಚುಕ್ಕಾಣಿಯಲ್ಲಿನ ಘನ ಸರ್ಕಾರ ಇನ್ನು ಮುಂದಾದರೂ ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾಗಳಂಥ ಅರ್ಥಹೀನ, ಅಸಮಾನತೆಯನ್ನು ಹೇರುವ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಇಪ್ಪತ್ತೆರಡು ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್ ಗೆ ನೀಡಲಾಗಿರುವ ಮಾನ್ಯತೆ ಮತ್ತು ಅವಕಾಶಗಳನ್ನು ಇತರ ಎಲ್ಲ ಭಾಷೆಗಳಿಗೂ ನೀಡಬೇಕು.

ನಮ್ಮ ಹಕ್ಕೊತ್ತಾಯಗಳು:

1. ಕೇಂದ್ರಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಇಪ್ಪತ್ತೆರಡು ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಈ ಅವಕಾಶ ಈಗಾಗಲೇ ಇದ್ದು, ಅದನ್ನು ಎಲ್ಲ ಭಾಷೆಗಳಿಗೆ ವಿಸ್ತರಿಸಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ, ಹಕ್ಕುಗಳು ಇರಬೇಕು.

2. ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾದಂಥ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಪ್ರತಿವರ್ಷ ಸೆಪ್ಟೆಂಬರ್ 14ರ ಹಿಂದೀ ದಿನಾಚರಣೆ ಕೊನೆಯಾಗಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು, ಯಾವ ಭಾಷೆಯನ್ನೂ ನಿರ್ಲಕ್ಷಿಸಕೂಡದು.

ತಾವು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಭಾರತ ಒಕ್ಕೂಟವನ್ನು ಸಮಾನತೆಯ ತತ್ತ್ವದಲ್ಲಿ ಪುನರ್ ರೂಪಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರವೇ ಒತ್ತಾಯಿಸಿದೆ.

Check Also

ಫೈರೀಂಗ್ ಮಾಡಿ ಅಂಗಡಿ ಲೂಟಿ ಮಾಡುವ ಯತ್ನ ವಿಫಲ….

ಬೆಳಗಾವಿ-ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದ ಅಂಗಡಿಯೊಂದರ ಮಾಲೀಕನ ಮೇಲೆ ಗುಂಡು ಹಾರಿಸಿ,ಹಣ ಲೂಟಿ ಮಾಡುವ …

Leave a Reply

Your email address will not be published. Required fields are marked *