Breaking News

ಜನೇವರಿಯಿಂದ ಸರ್ಕಾರಿ ದವಾಖಾನೆಗಳಲ್ಲಿ ಎಲ್ಲಾ ಫ್ರೀ…..

ಸಂಪೂರ್ಣ ಉಚಿತ ಪರೀಕ್ಷೆ-ಚೀಟಿರಹಿತ ಆಸ್ಪತ್ರೆ

ರಾಜ್ಯದಲ್ಲಿ 24×7 ಪ್ರಾಥಮಿಕ ಆರೋಗ್ಯ ಕೇಂದ್ರ: ಡಾ.ಕೆ.ಸುಧಾಕರ್

ಬೆಳಗಾವಿ, : ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24×7 ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ‌ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್)ಯ ಆವರಣದಲ್ಲಿ ಶನಿವಾರ (ನ.21) ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನವರಿಯಿಂದ ಎಲ್ಲ ರೀತಿಯ ಪರೀಕ್ಷೆ ಸಂಪೂರ್ಣ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ.
ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಗಳು ಎಲ್ಲವೂ ಉಚಿತವಾಗಿ ಮಾಡಲಾಗುವುದು.

ಚೀಟಿರಹಿತ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಯಾವುದೇ ಔಷಧಿ ಅಗತ್ಯವಿದ್ದರೂ ಸರ್ಕಾರ ಪೂರೈಸುತ್ತಿದೆ ಎಂದು ತಿಳಿಸಿದರು.

ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ; ಜನಸಂಖ್ಯೆ ಅಧರಿಸಿ ಹೆಚ್ಚುವರಿ ಪಿಎಚ್ ಸಿ ಆರಂಭ; ಆಂಬ್ಯುಲೆನ್ಸ್ ಸೇವೆ ಬಲವರ್ಧನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಶುಚಿತ್ವ ಇರುವುದಿಲ್ಲ ಎಂಬ ದೊಡ್ಡ ಆರೋಪ ಸರ್ಕಾರಿ ಆಸ್ಪತ್ರೆಗಳ ಮೇಲಿದೆ. ವಿಷಯ ಪರಿಣಿತಿ ಜತೆಗೆ ಆಡಳಿತಾತ್ಮಕ ಕೌಶಲವನ್ನು ವೈದ್ಯರು ರೂಢಿಸಿಕೊಳ್ಳಬೇಕು ಎಂದು‌ ಸಲಹೆ ನೀಡಿದರು.

ಆತ್ಮಾವಲೋಕನ ಅಗತ್ಯ:

ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದಾಗ್ಯೂ ಜನರಿಗೆ ಯಾಕೆ ಉತ್ತಮ ಸೌಕರ್ಯಗಳು ಸಿಗುತ್ತಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.
ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಖಾಸಗಿ ಆಸ್ಪತ್ರೆಗಿಂತ ಉತ್ತಮ ಸೇವೆ ನೀಡುವುದು‌ ಸಾಧ್ಯವಾಗಲಿದೆ ಎಂದರು.
ಎಲ್ಲ ಹಂತದ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಯ ಕೌಶಲ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ತರಬೇತಿ ನೀಡಲಾಗುವುದು ಎಂದರು.

ಕೋವಿಡ್ ಸಂದರ್ಭದಲ್ಲಿ ಎದುರಾದ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಘಟಕ ಆರಂಭಿಸಲಾಗುತ್ತಿದೆ.
ವೈದ್ಯಕೀಯ ಸೌಲಭ್ಯ ಹೆಚ್ಚಿಸಲು ಕೋವಿಡ್-೧೯ ಕೂಡ ಒಂದು ಪಾಠ ಕಲಿಸಿದಂತಾಗಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 350 ಹಾಸಿಗೆಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ಲೋಕಾರ್ಪಣೆ ಯಾಗಲಿದೆ.

ಆರಂಭದ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳು ಅತೀ ಹೆಚ್ಚು ಕಂಡುಬಂದವು. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಜನರ ಸಹಕಾರದಿಂದ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಶೇ.97 ಸರಾಸರಿ ಗುಣಮುಖರಾಗುತ್ತಿದ್ದಾರೆ. 25 390 ಸೋಂಕಿತರು ಪತ್ತೆ. ಸದ್ಯಕ್ಕೆ 400 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಲ್ಲಿ 0.8% ಸಾವಿನ ಪ್ರಮಾಣವಿದೆ. ಕೋವಿಡ್-೧೯ ನಿಯಂತ್ರಣದಲ್ಲಿ ಬೆಳಗಾವಿ ಜಿಲ್ಲೆ ಮಾದರಿಯಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಔಟ್ ಲುಕ್ ಸಮೀಕ್ಷೆ ಪ್ರಕಾರ ಉತ್ತಮವಾಗಿರುವ ವೈದ್ಯಕೀಯ ಕಾಲೇಜುಗಳಲ್ಲಿ ಬಿಮ್ಸ್ ಕೂಡ ಇದೆ ಎಂದರು.

ಆರೋಗ್ಯ-ವೈದ್ಯಕೀಯ ಶಿಕ್ಷಣ ವಿಲೀನ:

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ಮುಂಬರುವ ದಿನಗಳಲ್ಲಿ ವಿಲೀನಗೊಳಿಸಿ ಒಂದೇ ಇಲಾಖೆ ರೂಪಿಸುವ ಚಿಂತನೆ ಸರ್ಕಾರಕ್ಕಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.

ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸಲು ವೈದ್ಯಕೀಯ ಬೋಧಕ-ಬೋಧಕೇತರ ಸಿಬ್ಬಂದಿಗೆ 7ನೇ ವೇತನ ಆಯೋಗದ ಪ್ರಕಾರ ಸಂಬಳ; ಪಿಂಚಣಿ ವ್ಯವಸ್ಥೆ; ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹೆಚ್ಚಳ ಮತ್ತಿತರ ಕೆಲಸಗಳನ್ನು ಸರ್ಕಾರ ಮಾಡಿದೆ ಎಂದರು.
ಸರ್ಕಾರ ಮೂಲಸೌಕರ್ಯವನ್ನು ಒದಗಿಸಬಹುದು ಆದರೆ ಗುಣಮಟ್ಟದ ಚಿಕಿತ್ಸೆ ನೀಡುವುದು ವೈದ್ಯರ ಜವಾಬ್ದಾರಿಯಾಗಿದೆ.

ಕೋವಿಡ್-೧೯ ಸಂದರ್ಭದಲ್ಲಿ ಸರ್ಕಾರಿ ವೈದ್ಯರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನರಲ್ಲಿ ವಿಶ್ವಾಸ ಮೂಡಿಸಬೇಕಾದರೆ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆ ಅಗತ್ಯವಾಗಿದೆ ಎಂದು ಡಾ.ಸುಧಾಕರ್ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ, ಕೋವಿಡ್-೧೯ ಸಂದರ್ಭದಲ್ಲಿ ಅಹರ್ನಿಶಿ ಕೆಲಸ ಮಾಡುವ ಮೂಲಕ ರಾಜ್ಯವನ್ನು ಮಾದರಿಯಾಗಿಸಿದ ಸಚಿವರು, ವೈದ್ಯರು ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದರು.

ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯ:

ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಇಲ್ಲದಿರುವುದರಿಂದ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕು ಎಂದು ಶಾಸಕ ಬೆನಕೆ ಒತ್ತಾಯಿಸಿದರು.
500 ಹಾಸಿಗೆಯ ನೂತನ ಆಸ್ಪತ್ತೆಯ ನಿರ್ಮಾಣದ ಅಗತ್ಯವಿದ್ದು, ಹಳೆಯ‌ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಆಸ್ಪತ್ರೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, 2005 ರಲ್ಲಿ ಆರಂಭಗೊಂಡ ಬಿಮ್ಸ್ ನಲ್ಲಿ ಇದೀಗ 150 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ ಎಂದರು.

ಬಿಮ್ಸ್ ಆಸ್ಪತ್ರೆಯು 740 ಹಾಸಿಗೆಗಳಿದ್ದು, ಹೊಸ 300 ಹಾಸಿಗೆ ಸೇರಿದಂತೆ ಇದೀಗ 1040 ಹಾಸಿಗಗಳ ಸೌಲಭ್ಯ ಹೊಂದಿದೆ.

3288 ಕೋವಿಡ್-೧೯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 250 ಕ್ಕೂ ಅಧಿಕ ಸೋಂಕಿತರ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಲಾಗಿದೆ.
61 ಸಾವಿರಕ್ಕೂ ಅಧಿಕ ಜನರ ಕೋವಿಡ್-೧೯ ಪರೀಕ್ಷೆ ಮಾಡಲಾಗಿದ್ದು, 150 ಸೋಂಕಿತರಿಗೆ ಡಯಾಲಿಸಿಸ್ ಕೂಡ ಮಾಡಲಾಗಿದೆ ಎಂದು ಡಾ.ದಾಸ್ತಿಕೊಪ್ಪ ವಿವರಿಸಿದರು.

500 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವ:

ಬಿಮ್ಸ್ ಆವರಣದಲ್ಲಿ 500 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣದ ಪ್ರಸ್ತಾವನ್ನು ಇದೇ ಸಂದರ್ಭದಲ್ಲಿ ಡಾ.ದಾಸ್ತಿಕೊಪ್ಪ ಅವರು ಸಚಿವ ಡಾ.ಸುಧಾಕರ್ ಅವರಿಗೆ ಸಲ್ಲಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್, ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ವಿ.ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.
ಬಿಮ್ಸ್ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
****

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *