ಬೆಳಗಾವಿ: ಈ ಮೊಬೈಲ್ ಕೈಗೆ ಬಂದಾಗಿನಿಂದ ಹಳ್ಳಿಯ ಹಲವಾರು ಪ್ರತಿಭಾವಂತರು ತಮ್ಮಲ್ಲಿನ ಪ್ರತಿಭೆಗಳಿಗೆ ಸ್ವತಃ ವೇದಿಕೆ ಕಲ್ಪಿಸಿಕೊಳ್ಳುವ ಮೂಲಕ ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಝೀ ಟಿ.ವಿ ಸರೆಗಮಪ ರಿಯಾಲಿಟಿ ಶೋ ನಲ್ಲಿ ಮಿಂಚಿದ ಹಣ್ಮಂತು ಇದಕ್ಕೆ ಉತ್ತಮ ಉದಾಹರಣೆ. ಇತ್ತೀಚೆಗೆ ಬೆಳಗಾವಿಯ ಉದಯ್ ಎಂಬ ಪ್ರತಿಭಾವಂತ ಗಾಯಕ ಉಧೋ.. ಉಧೋ….ಎಂಬ ಹಾಡು ಬರೆದು ತಾನೇ ಸ್ವರ ಸಂಯೋಜನೆ ಮಾಡಿ Rap ಮಾದರಿಯಲ್ಲಿ ಹಾಡಿರುವ ವಿಡಿಯೋ ಯೂ ಟ್ಯೂಬ್ ಲಿ ಸಕತ್ ಸೌಂಡು ಮಾಡಿದೆ. ಈಗ ಈ ಸಾಲಿಗೆ ಸೇರಲು ಮತ್ತೊಂದು ಗ್ರಾಮೀಣ ತಂಡ ರೆಡಿಯಾಗಿದೆ ಅದೇ ಈ ಸುರೇಶ ಪೂಜಾರ ಮತ್ತವನ ಸ್ನೇಹಿತರು.
ಹೌದು !ಇದೇ ಡಿಸೆಂಬರ್ 25 ರ ಕ್ರಿಸ್ ಮಸ್ ಹಬ್ಬದಂದು ಈ *ಮರೆಯಾಗಿ* ಎಂಬ ವಿಡಿಯೋ ಹಾಡು ಲೋಕಾರ್ಪಣೆಯಾಗಲಿದೆ. ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಸುರೇಶ ಎಂಬ ಯುವ ಪ್ರತಿಭೆ ಕಳೆದ ಆರು ತಿಂಗಳ ಹಿಂದೆಯಷ್ಟೇ *ಸುರೇಶ ಮಾರಿಹಾಳ* ಹೆಸರಿನ ಯೂಟ್ಯೂಬ್ ಚಾನಲ್ ಆರಂಭಿಸಿದ್ದು, *ಮರೆಯಾಗಿ* ಎಂಬ ಶೀರ್ಷಿಕೆಯ ಹಾಡನ್ನು ಸ್ವತಃ ರಚಿಸಿದ್ದಾರೆ. ಈ ಹಾಡನ್ನು ತನ್ನ ಗೆಳೆಯರೊಂದಿಗೆ ಹಂಚಿಕೊಂಡಾಗ ಇದಕ್ಕೆ ಮ್ಯೂಸಿಕ್ ಟಚ್ ಕೊಟ್ಟು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪಲೋಡ್ ಮಾಡಿದ್ರೆ ಹೆಂಗೇ? ಅನ್ನೋ ಐಡಿಯಾ ಹೊಳೆದಿದೆ.
ತಕ್ಷಣ ತನ್ನ ಗೆಳೆಯರನ್ನು ಸೇರಿಸಿ ಬೆಳಗಾವಿಯ ನಕುಲ್ ಮತ್ತು ವಿನಾಯಕ ಅವರನ್ನು ಸಂಪರ್ಕಿಸಿ ಆ ಹಾಡಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಮಾರಿಹಾಳ ಗ್ರಾಮದ *ಥಾಮ್ಸನ್* ಎಂಬ ಯುವ ಪ್ರತಿಭೆ ಈ ಹಾಡಿಗೆ ದನಿಯಾಗಿದ್ದು, ಯುವ ಪ್ರತಿಭೆ ಸುರೇಶ ಮಾರಿಹಾಳ ಸಾಹಿತ್ಯ ಬರೆದು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಾದ ಕೆಲವು ಸ್ಥಳಗಳಲ್ಲಿ ಈ ಹಾಡಿಗಾಗಿ ಚಿತ್ರೀಕರಣ ಮಾಡಲಾಗಿದ್ದು, ಅದ್ಭುತವಾದ ತಾಣಗಳ ಫೋಟೋಗ್ರಫಿ ಬಳಸಿಕೊಳ್ಳಲಾಗಿದೆ.
ಅಪ್ಪಟ ಹಳ್ಳಿ ಪ್ರತಿಭೆ *ಸುರೇಶ* ನ ಈ ಪ್ರಯತ್ನಕ್ಕೆ ಆತನ ಸ್ನೇಹಿತರು ಮತ್ತು ಕುಟುಂಬದವರು ಸಾಥ್ ನೀಡಿದ್ದಾರೆ. ಪಿಯುಸಿ ಓದಿರುವ ಸುರೇಶಗೆ ಸಂಗೀತದಲ್ಲಿ ಆಸಕ್ತಿ ಇದ್ದು ಬರವಣಿಗೆ ರೂಢಿಸಿಕೊಂಡಿದ್ದಾನೆ. ಇವರ ತಂದೆ ಸ್ವಂತ ಉದ್ದಿಮೆ ಆರಂಭಿಸಿದ್ದು ಬೇಕರಿಯಲ್ಲಿ ತಂದೆಗೆ ನೆರವಾಗುತ್ತ ಈ ಹಾಡನ್ನು ದೃಶ್ಯಮಾಧ್ಯಮಕ್ಕೆ ಪರಿವರ್ತಿಸಲು ಆರು ತಿಂಗಳ ಕಾಲ ಶ್ರಮ ಪಟ್ಟಿದ್ದಾನೆ.
ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರಾದ ತೌಸೀಫ್ ಫನಿಬಂದ್ ಇವರು ಈ ವಿಡಿಯೋ ಹಾಡನ್ನು ಮಾರಿಹಾಳದ ಚರ್ಚ್ ನಲ್ಲಿ ಆಯೋಜಿಸಲಾದ ಕ್ರಿಸ್ಮಸ್ ಸಮಾರಂಭದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಇದೇ ಡಿಸೆಂಬರ್ 25 ರಂದು ರಾತ್ರಿ 8.30ಕ್ಕೆ ಈ ವಿಡಿಯೋ ಲಾಂಚ್ ಆಗಲಿದ್ದು ಸುರೇಶ ಮಾರಿಹಾಳ ಯೂಟ್ಯೂಬ್ ಚಾನಲ್ ನಲ್ಲಿ *ಮರೆಯಾಗಿ* ಹಾಡನ್ನು ವೀಕ್ಷಿಸಬಹುದಾಗಿದೆ. ಹಳ್ಳಿಯ ಈ ಪ್ರತಿಭೆಗಳಿಗೆ ನನ್ನ ಶುಭ ಹಾರೈಕೆಗಳು.