ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಎದುರು ವೀರ ಕನ್ನಡಿಗರು ಕನ್ನಡ ಧ್ವಜ ಹಾರಿಸಿದ ಬಳಿಕ ನಾಡದ್ರೋಹಿ ಎಂಇಎಸ್ ಗೆ ಅಸೂಹೆ ಶುರುವಾಗಿದೆ. ಕನ್ನಡಿಗರ ಸಂಭ್ರಮ ನೋಡಿ ಸಹಿಸಿಕೊಳ್ಳದ ಈ ನಾಡ ವಿರೋಧಿಗಳು ಈಗ ತಗಾದೆ ತೆಗೆದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಎಂಇಎಸ್ ನಾಯಕರ ನಿಯೋಗ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಬೆಳಗಾವಿಯ ರೈಲ್ವೆ ನಿಲ್ದಾಣ, ಪ್ರಾದೇಶಿಕ ಗ್ರಾಮೀಣ ಆಯುಕ್ತರ ಕಚೇರಿ ಮತ್ತು ಪಾಲಿಕೆಯ ಎದುರು ಕಾನೂನು ಬಾಹಿರವಾಗಿ ಹಳದಿ, ಕೆಂಪು ಬಣ್ಣದ ಧ್ವಜ ಹಾರಿಸಲಾಗಿದ್ದು, ಧ್ವಜ ಹಾರಿಸಿದ ಕನ್ನಡ ಸಂಘಟನೆಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಎಂಇಎಸ್ ಹೊಸ ಕ್ಯಾತೆ ಪ್ರಾರಂಭಿಸಿದೆ.
ಹಳದಿ, ಕೆಂಪು ಬಣ್ಣದ ಧ್ವಜಕ್ಕೆ ಮಾನ್ಯತೆ ಸಿಕ್ಕಿಲ್ಲ. ರಾಷ್ಟ್ರ ಧ್ವಜದ ಎದುರು ಈ ಧ್ವಜವನ್ನು ಹಾರಿಸಿ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಮಾಡುವ ಕೆಲಸವನ್ನು ಬೆಳಗಾವಿಯ ಕನ್ನಡ ಸಂಘಟನೆಗಳು ಮಾಡುತ್ತಿವೆ. ಕನ್ನಡ ಧ್ವಜ ಹಾರಿಸುವಾಗ ರಾಷ್ಟ್ರ ಗೀತೆಗೂ ಕನ್ನಡ ಸಂಘಟನೆಗಳು ಅವಮಾನ ಮಾಡಿವೆ ಎಂದು ಎಂಇಎಸ್ ಆರೋಪಿಸಿ ಕನ್ನಡ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಇದಾದ ಬಳಿಕ ಕಚೇರಿ ಎದುರು ಭಾರತ ಮಾತಾಕೀ ಜೈ.. ಒಂದು ರಾಷ್ಟ್ರ ಒಂದು ಧ್ವಜ ಎನ್ನುವ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದೆ.