ಗೋಕಾಕ : ಸಾವಿತ್ರಿ ಬಾಯಿ ಫುಲೆ ಅವರು ಮೇಲ್ವರ್ಗ ಜಾತಿ, ವ್ಯಕ್ತಿಗಳಿಗೆ ಮೀಸಲಾಗಿದ್ದ ಶಿಕ್ಷಣವನ್ನು ಶೋಷಿತ ಸಮುದಾಯಗಳಿಗೆ ಮುಟ್ಟಿಸುವಲ್ಲಿ ಶ್ರಮಿಸಿದವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಹಿಲ್ ಗಾರ್ಡನ್ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಸಾವಿತ್ರಿ ಬಾಯಿ ಫುಲೆ ಅವರ 190ನೇ ಜಯಂತಿ ಅಂಗವಾಗಿಯೇ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಸಾವಿತ್ರಿ ಬಾಯಿ ಫುಲೆ ಅವರ ಹೋರಾಟ, ಜೀವನ ಚರಿತ್ರೆ ಕೊಡುಗೆಯನ್ನು ಪರಿಚಯ ಮಾಡುವುದಕ್ಕೆ ಗೋಕಾಕದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇಡೀ ರಾಜ್ಯ, ದೇಶದ ತುಂಬಾ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ಮಾನವ ಬಂಧುತ್ವ ವೇದಿಕೆ ಸಂಘಟನೆಯಿಂದಲೂ ಆಚರಣೆ ಮಾಡಲಾಗುತ್ತಿದೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ಶುಭಾಶಯ ಕೋರಿದರು.
ಶೋಷಿತ ಸಮುದಾಯಗಳಿಗೆ ಶಿಕ್ಷಣವನ್ನು ಮುಟ್ಟಿಸುವಲ್ಲಿ ಶ್ರಮಿಸಿದರು. ಅದರ ಫಲವಾಗಿ ಸಾವಿತ್ರಿ ಬಾ ಮತ್ತು ಜ್ಯೋತಿ ಬಾ ಅಸ್ಪೃಶ್ಯ ಬಾಲಕಿಯರಿಗಾಗಿ ಶಾಲೆಯನ್ನು ಹುಟ್ಟುಹಾಕಿದರು. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುಧಾರಣೆಗಳತ್ತ ಗಮನಹರಿಸುವ ಮೂಲಕ ಕೆಳವರ್ಗದ ಮತ್ತು ಮಹಿಳೆಯರ ಉನ್ನತಿಗಾಗಿ ಹೆಚ್ಚಿನ ಕೊಡುಗೆ ನೀಡಿದರು.
ಕೇವಲ ಇಷ್ಟೇ ಅಲ್ಲದೆ ಸಾವಿತ್ರಿ ಬಾ ವಿಧವೆಯರ ಪುನರ್ವಿವಾಹದ ಪರವಾಗಿ ಧ್ವನಿ ಎತ್ತಿದರು ಮತ್ತು ಬಾಲ್ಯವಿವಾಹವನ್ನು ರದ್ದುಗೊಳಿಸಲು ಹೋರಾಡಿದರು. ಆ ಮೂಲಕ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ಅವರು ನೀಡಿದ ಕೊಡುಗೆ ಭಾರತೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ ಎಂದು ಹೇಳಿದರು.