ಬೆಳಗಾವಿ :ಮೈಸೂರು ಮೃಗಾಲಯ ಮಾದರಿಯಲ್ಲೇ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಕಿತ್ತೂರು ಚನ್ನಮ್ಮ ಮೃಗಾಲಯವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಭಾನುವಾರ ನಗರದಲ್ಲಿ ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯ ಅಭಿವೃದ್ಧಿಗೊಳಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಈಗಾಗಲೇ ಇಲ್ಲಿ ವನ್ಯಜೀವಿಗಳು ಬರಬೇಕಿತ್ತು. ಆದರೆ ಕೊವೀಡ್ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಈ ಯೋಜನೆಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಮೃಗಾಲಯಕ್ಕೆ ಹುಲಿ ಸಫಾರಿ, ಸಿಂಹ, ಚಿರತೆ, ಕರಡಿ, ಜೀರಾಫೆಗಳು ಸೇರಿದಂತೆ ಮತ್ತಿತರ ವನ್ಯಜೀವಿಗಳನ್ನು ಸೇರ್ಪಡೆಯಾಗಲಿವೆ. ಮೃಗಾಲಯ ದ ಅತ್ಯವಶ್ಯಕವಾದ ನೀರಿಗಾಗಿ ಕೆರೆ ತುಂಬಿಸುವ ಕಾರ್ಯ ನಡೆಯುತ್ತಿದೆ. ಈ ಮೃಗಾಲಯಕ್ಕೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು
ಜನ ಸಮುದಾಯದಲ್ಲಿ ವನ್ಯಪ್ರಾಣಿ, ಪಕ್ಷಿಗಳ ಮತ್ತು ವನ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯವಾಗಿದೆ. ಅರಣ್ಯ ಇಲಾಖೆಯಿಂದ ಈಗಾಗಲೇ ಸುಸಜ್ಜಿತ ಮೃಗಾಲಯದ ಇತರೇ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ. ಇದರಿಂದ ಜಿಲ್ಲೆಗೆ ಹೊಸ ಕಾಂತಿ ಮೂಡಲಿದೆ. ಜೊತೆಗೆ ಪ್ರವಾಸಿಗರ ಸಂಖ್ಯೆ ಇಮ್ಮಡಿಗೊಳ್ಳುವುದಲ್ಲದೆ ಜಿಲ್ಲಾ ಪ್ರವಾಸೋದ್ಯಮ ಗಟ್ಟಿಗೊಳಿಸಬಹುದಾಗಿದೆ.
ಈ ಮೃಗಾಲಯಕ್ಕೆ ಕೊರತೆ ಇರುವ ಅವಶ್ಯಕ ಅನುದಾನ ಒದಗಿಸಲಾಗುವುದು ಎಂದು ಹೇಳಿದರು. ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಶ್ರೀಶೈಲ ಮಠದ, ಡಾ. ಡಿ.ಎನ್. ಮಿಸಾಳೆ ಉಪಸ್ಥಿತರಿದ್ದರು