Breaking News

ಬೆಳಗಾವಿ ಡಿಸಿ ಮಾಡ್ತಾರೆ ಗ್ರಾಮ ವಾಸ್ತವ್ಯ.

ಬೆಳಗಾವಿ, : ರಾಜ್ಯ ಸರಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇಯ ಶನಿವಾರ ಜಿಲ್ಲಾಧಿಕಾರಿಗಳು ಮತ್ತು ತಾಲೂಕುಗಳ ತಹಶೀಲ್ದಾರರು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಅಹವಾಲುಗಳನ್ನು ಸ್ವೀಕರಿಸಿ, ಅಂದು ರಾತ್ರಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಎಂಬ ಘೋಷದಡಿ ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶನಿವಾರ(ಫೆ.20) ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ನಡೆಸಲಿದ್ದಾರೆ.

ಅಂದು ಬೆಳಿಗ್ಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಗ್ರಾಮದ ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ನಂತರ ಅಂದು ರಾತ್ರಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.

ಅದೇ ದಿನ (ಫೆ.20) ಆಯಾ ಉಪ ವಿಭಾಗಾಧಿಕಾರಿಗಳು ಹಾಗೂ ತಾಲ್ಲೂಕುಗಳ ತಹಶೀಲ್ದಾರರು ಕೂಡ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಕಿತ್ತೂರು ತಹಶೀಲ್ದಾರರು (ಬಸರಖೋಡ), ಬೆಳಗಾವಿ ತಹಶೀಲ್ದಾರರು (ಧಾಮಣೆ ಎಸ್ ಬೈಲೂರ), ಖಾನಾಪುರ(ಪೋಟೋಳಿ), ಹುಕ್ಕೇರಿ (ಹುಳ್ಳೊಳ್ಳಿ), ರಾಮದುರ್ಗ (ಚಿಂಚನೂರ), ಸವದತ್ತಿ (ಜಾಲಿಕಟ್ಟಿ), ಗೋಕಾಕ(ಏಳಪಟ್ಟಿ), ಮೂಡಲಗಿ (ಹನಮಾಪುರ), ಚಿಕ್ಕೋಡಿ(ಹತ್ತರವಾಟ), ನಿಪ್ಪಾಣಿ (ಶೆಂಡೂರ), ರಾಯಬಾಗ (ಬೂದಿಹಾಳ), ಅಥಣಿ(ಐಗಳಿ) ಹಾಗೂ ಕಾಗವಾಡ(ಲೋಕೂರ) ತಹಶೀಲ್ದಾರರು ಕೂಡ ಅಂದು‌ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮವಾಸ್ತವ್ಯದಲ್ಲಿನ ಕಾರ್ಯಗಳು:

ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಭೇಟಿ ನೀಡಿದ ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗ್ರಾಮಸ್ಥರ ಜತೆ ಚರ್ಚಿಸಿ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ಸರಕಾರದ ನಿರ್ದೇಶನಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

ಗ್ರಾಮದಲ್ಲಿ ಸ್ಮಶಾನ ಲಭ್ಯತೆಯ ಬಗ್ಗೆ ಪರಿಶೀಲಿಸುವುದು ಹಾಗೂ ಸ್ಮಶಾನವಿಲ್ಲದಿದ್ದಲ್ಲಿ ಸರ್ಕಾರದ ಆದೇಶದಂತೆ ಕ್ರಮವಹಿಸುವುದು. ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮ ವಹಿಸುವುದು.

ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಇದ್ದಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸುವುದು, ಪ್ರವಾಹದ ಹಾನಿ ತಡೆಗಟ್ಟಲು ಸಲಹೆ ನೀಡುವುದು, ಅತಿವೃಷ್ಠಿ, ಅನಾವೃಷ್ಠಿ ಎದುರಿಸಲು ಮುಂಜಾಗೃತೆ ಕ್ರಮವಹಿಸುವುದು.

ಕಂದಾಯ ಗ್ರಾಮಗಳ ರಚನೆ, ಗ್ರಾಮದಲ್ಲಿ ಎಸ್.ಸಿ., ಎಸ್.ಟಿ., ಬಿ.ಸಿ.ಎಂ. ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿಯಲ್ಲಿರುವ ಬಗ್ಗೆ ಕ್ರಮ ವಹಿಸುವುದು. ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮ ಇತ್ಯಾದಿ ಬಗ್ಗೆ ಪರಿಶೀಲಿಸುವುದು.

ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಆದೇಶಿಸುವುದು.

ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆ ಕಟ್ಟಲು ಅನುದಾನ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನ ನೀಡುವುದು.
ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಉನ್ನತ ಅಧಿಕಾರಿಗಳು ಖುದ್ದಾಗಿ ಸ್ಪಂದಿಸಲು ಹಾಗೂ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಅವರ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ರಾಜ್ಯಸರ್ಕಾರವು ಈ ನೂತನ ಗ್ರಾಮವಾಸ್ತವ್ಯದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿಗಳನ್ನು ನೀಡಿದೆ.

ಸರ್ಕಾರದ ಈ ಮಾರ್ಗಸೂಚಿಗಳ ಪ್ರಕಾರ ಆಯಾ ಗ್ರಾಮಗಳ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
**************

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *