ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಮಾನವೀಯತೆ ಮೆರೆದಿದ್ದಾರೆ. ಮಳೆಯಿಂದ ಮನೆ ಬಿದ್ದಿದ್ದು, ನೆರವು ಕೇಳಿ ಜಿಲ್ಲಾಧಿಕಾರಿ ಕಚೇರಿಗೆ ವೃದ್ಧೆಯೊಬ್ಬರು ಬಂದಿದ್ದರು. ಮನೆಯ ಸೋರುತ್ತಿದ್ದು, ಎಲ್ಲಾ ವಸ್ತುಗಳನ್ನು ಮನೆಯ ಹೊರಗೆ ಇಟ್ಟಿದ್ದೇವೆ ಎಂದು ಹೇಳಿದರು. ತಕ್ಷಣ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಾತ್ಕಾಲಿಕ ಶೆಟ್ ನಿರ್ಮಾಣ ಮಾಡುವಂತೆ ಸೂಚನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕಳೆದ ಒಂದು ತಿಂಗಳಿಂದ ಮಳೆಯಾಗುತ್ತಿದೆ. ಮಳೆಯಿಂದ ಸಾಕಷ್ಟು ಅನಾಹುತ ಸೃಷ್ಟಿಯಾಗಿವೆ. ಗಣಪತಿ ಗಲ್ಲಿಯಲ್ಲಿ ಮನೆಯೊಂದು ಸೋರುತ್ತಿದೆ. ಮನೆ ಸಂಪೂರ್ಣ ಕುಸಿಯುವ ಭೀತಿ ಇದೆ. ನೆರವು ಕೇಳಿ ವೃದ್ಧೆಯೊಬ್ಬರು ತನ್ನ ಮಗಳ ಜತೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು.
ಈ ವೇಳೆ ಆರೋಗ್ಯ ಇಲಾಖೆಯ ವಿಡಿಯೋ ಕಾನ್ಪರೆನ್ಸ್ ನಡೆಯುತ್ತಿತ್ತು. ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೇರಿ ಬಹುತೇಕ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಜ್ಜಿಯೊಬ್ಬರು ಬಂದಿದ್ದಾರೆ ಎಂದು ಸಿಬ್ಬಂದಿ ಜಿಲ್ಲಾಧಿಕಾರಿಗೆ ಹೇಳಿದ್ರು. ತಕ್ಷಣ ಸಭೆಯನ್ನು ಅರ್ಧದಲ್ಲಿ ಬಿಟ್ಟು ಜಿಲ್ಲಾಧಿಕಾರಿ ಹೊರಗೆ ಬಂದ್ರು. ಅಜ್ಜಿಯ ಸಮಸ್ಯೆ ಕೇಳಿ, ತಕ್ಷಣ ತಾತ್ಕಾಲಿಕ ಶೆಟ್ ನಿರ್ಮಾಣ ಮಾಡಿಕೊಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.