ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂರನೇಯ ದಿನವಾದ ಇಂದು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ಕಾವು ಏರತೊಡಗಿದೆ.
ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಎದುರಿಸುವ ನಿರ್ಧಾರ ಕೈಗೊಂಡಿದ್ದು,ಇಂದು ಬೆಂಗಳೂರಿನಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವೂ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಸುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಗೊತ್ತಾಗಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಅವರು ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಮೇಲೆ ನಡೆಸುವಂತೆ,ಖಡಕ್ ಸೂಚನೆ ನೀಡಿದ ಹಿನ್ನಲೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ಸಿನ ಉನ್ನತ ಮಟ್ಟದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಇತರ ನಾಯಕರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ನಾಳೆ ಬೆಳಿಗ್ಗೆ ಬೆಳಗಾವಿಗೆ ಬರುತ್ತಿದ್ದು.ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಕುರಿತು ಕೆಪಿಸಿಸಿ ಕೈಗೊಂಡ ಅಂತಿಮ ನಿರ್ಣಯದ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ನಾಳೆ ಬೆಳಿಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ನಿರ್ಧಾರ ಪ್ರಕಟಿಸುತ್ತಾರೆ ಎಂದು ನಂಬಲರ್ಹ ಮೂಲಗಳು ದೃಡ ಪಡಿಸಿವೆ
ವಿಶೇಷ ಸೂಚನೆ- ಈ ಸುದ್ಧಿಯಲ್ಲಿ ಬಳಿಸಿಕೊಂಡ ಚಿತ್ರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ನಾಯಕರು ಈ ಹಿಂದೆ ಸಭೆ ಮಾಡಿರುವ ಚಿತ್ರ.