ಬೆಳಗಾವಿ: ಗಣೇಶ ಚತುರ್ಥಿ ಮುನ್ನಾ ದಿನವಾದ ಗುರುವಾರ ಜನರು, ವ್ಯಾಪಾಸ್ಥರು ನಗರದ ಹೂವು ಮಾರುಕಟ್ಟೆಗೆ ಹೂವು ಖರೀದಿಗೆ ಮುಗಿಬಿದ್ದ ಪರಿಣಾಮ ಜನಜಂಗು ಉಂಟಾಗಿತ್ತು.
ಬೆಳಗ್ಗೆ 6 ಗಂಟೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಮಾರುಕಟ್ಟೆಯತ್ತ ದೌಡಾಯಿಸಿದರು. ಮಧ್ಯಾಹ್ನ 12 ಗಂಟೆಯವರೆಗೂ ಖರೀದಿಯಲ್ಲಿ ತೊಡಗಿದ್ದರು. ಖರೀದಿಗೆ ಬಂದ ಜನರು, ರೈತರು ಹಾಗೂ ವ್ಯಾಪಾತಸ್ಥರು ರಸ್ತೆ ಬದಿಗೆ ವಾಹನಗಳನ್ನು ನಿಲ್ಲಿಸಿದ್ದರಿಂದ ಬೆಳಗ್ಗೆ 7 ರಿಂದ ಒಂದು ತಾಸು ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು.
ಹೂವು ಬೆಳಗಾರರಿಗೆ ಸಿಹಿ ಕಹಿ: ಕಳೆದ ಎರಡು ವರ್ಷಗಳಿಂದ ಹಬ್ಬದ ಸೀಸನ್ ನಲ್ಲಿ ಲಾಕ್ ಡೌನ್ ಪರಿಣಾಮ ವ್ಯಾಪಾರವಿಲ್ಲದೆ ಹೂವು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸಿದ್ದರು. ಆತಂಕದಲ್ಲೇ ಹೂವು ಕೃಷಿ ಮಾಡಿದ್ದ ರೈತರಿಗೆ ಈ ಬಾರಿ ಅದೃಷ್ಟ ಕೈಹಿಡಿದಿದೆ. ಶ್ರಾವಣ ಮಾಸದ ಸರಣಿ ಹಬ್ಬದ ಸೀಸನ್ ನಲ್ಲಿ ಹೂಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.
ಚೆಂಡು ಹೂವು ಬೆಳೆಗಾರರಿಗೆ ಕಹಿ, ಗುಲಾಬಿ, ಸೇವಂತಿಗೆ ರೈತರಿಗೆ ಸಿಹಿ: ಎರಡು ವರ್ಷಗಳ ಬಳಿಕ ಹಬ್ಬಗಳ ಆಚರಣೆ ಆರಂಭವಾಗಿದ್ದರೂ ಚೆಂಡು ಹೂವು ಬೆಲೆಯಲ್ಲಿ ಏರಿಕೆ ಕಾಣದೇ ಬೆಳೆಗಾರರು ನಿರಾಸೆ ಹೊಂದಿದ್ದಾರೆ. ಕೆಜಿಗೆ ಚೆಂಡು ಹೂವು ಬೆಲೆ 50-60 ರೂ. ದಾಟುತ್ತಿಲ್ಲ. ಹೂವು ಬೆಳೆಗಾರರು ದರ ಕುಸಿತದಿಂದ ನಿರಾಸೆಗೆ ಒಳಗಾಗಿದ್ದಾರೆ.
ಇನ್ನು ಸೇವಂತಿಗೆ, ಗುಲಾಬಿ ಹೂವಿಗೆ ಉತ್ತಮ ಬೇಡಿಕೆ ಬಂದಿದ್ದು ರೈತರು ಖುಷ್ ಆಗಿದ್ದಾರೆ. ಗುಲಾಬಿ ಹೂವು ಕೆಜಿಗೆ 200-300, ಸೇವಂತಿಗೆ 80 ರಿಂದ 200 ರೂ.ವರೆಗೆ ಮಾರಾಟವಾಗುತ್ತಿವೆ.
ಕೊರೊನಾ ಮರೆತು ಮುಗಿಬಿದ್ದ ಜನ: ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಇದ್ದರೂ ಜನರು ಲೆಕ್ಕಿಸದೇ ಖರೀದಿಯಲ್ಲಿ ತೊಡಗಿದ್ದರು. ಮಾಸ್ಕ್, ಸಾಮಾಜಿಕ ಅಂತರ ಲೆಕ್ಕವೇ ಇರಲಿಲ್ಲ. ಜನಜಂಗುಳಿ ನಿರ್ಮಾಣವಾಗಿತ್ತು. ಜನರು ಕೊರೊನಾ ಇರುವುದನ್ನೆ ಮರೆತು ಹಬ್ಬದ ಹೂವು ಖರೀದಿಗೆ ಮುಗಿಬಿದ್ದಿದ್ದರು.