Breaking News

ಕ್ರಾಂತಿಯ ನೆಲ ಕಿತ್ತೂರಿಗೆ ಬಂಪರ್ ಲಾಟರಿ….

ಕಿತ್ತೂರು-ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಣೆ

ಬೆಳಗಾವಿ(ಕಿತ್ತೂರು), ಅ.23(ಕರ್ನಾಟಕ ವಾರ್ತೆ): ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರಕಟಿಸಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021 ಕ್ಕೆ ಶನಿವಾರ (ಅ.23) ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಅವರು ಜನರ ಕರತಾಡನ ಮಧ್ಯೆ ಪ್ರಕಟಿಸಿದರು.

ರಾಜ್ಯಮಟ್ಟದ ಉತ್ಸವ- ಸಿಎಂ ಭರವಸೆ:

ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರಕಾರ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಲವು‌ ವರ್ಷಗಳ‌ ಹಿಂದೆ ವೀರಜ್ಯೋತಿಯು ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿಯು ರಾಜ್ಯದಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವೇದಿಕೆಯ ಮೂಲಕವೇ ಅಧಿಕಾರಿಗಳಿಗೆ ಆದೇಶವನ್ನು ನೀಡಿದರು.
ಕಿತ್ತೂರು ‌ಉತ್ಸವದ ಆರಂಭಿಕ‌ ದಿನಗಳನ್ನು ಮೆಲುಕು ಹಾಕಿದ‌ ಮುಖ್ಯಮಂತ್ರಿಗಳು, ಇತ್ತೀಚಿನ ದಿನಗಳಲ್ಲಿ ವೇದಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.

ಕಿತ್ತೂರು ಚೆನ್ನಮ್ಮ ಝಾನ್ಸಿಯ ರಾಣಿಗಿಂತ ನಲವತ್ತು ವರ್ಷಗಳ ಮುಂಚೆಯೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದಳು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬುದನ್ನು ಸಾಬೀತುಪಡಿಸಬೇಕಿದೆ.

ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ಅವರದು ತಾಯಿ-ಮಗನ‌ ಸಂಬಂಧ. ಬ್ರಿಟೀಷರ ಕುತಂತ್ರಕ್ಕೆ ರಾಯಣ್ಣ ಸೆರೆಸಿಕ್ಕಾಗ‌ ಚೆನ್ನಮ್ಮ ಅಧೀರಳಾಗುತ್ತಾಳೆ.

ಸತ್ಯ, ನ್ಯಾಯ‌ ಹಾಗೂ ದೇಶಕ್ಕಾಗಿ ಹೋರಾಡಲು ನಾವು ಸಂಕಲ್ಪ ಮಾಡಬೇಕಿದೆ. ದೇಶವನ್ನು ಆಂತರಿಕ ಮತ್ತು ‌ಬಾಹ್ಯಶಕ್ತಿಗಳಿಂದ ರಕ್ಷಿಸಬೇಕಿದೆ. ಈ‌ ನಿಟ್ಟಿನಲ್ಲಿ ‌ಶ್ರಮಿಸುತ್ತಿರುವ ಪ್ರಧಾನಮಂತ್ರಿಗಳು ದೇಶವನ್ನು ಸಶಕ್ತವಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕಿತ್ತೂರು ಮಾಸ್ಟರ್ ಪ್ಲ್ಯಾನ್ ಗೆ ಹೆಚ್ಚಿನ ಅನುದಾನ:

ಪ್ರಾಧಿಕಾರದ ಮಾಸ್ಟರ್ ‌ಪ್ಲ್ಯಾನ್ ಗೆ ಒಟ್ಟಾರೆ 200 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ. ಮುಂದಿನ ಆಯವ್ಯಯದಲ್ಲಿ ಪ್ರಾಧಿಕಾರಕ್ಕೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮೀಸಲಾತಿ- ಕಾನೂನು ‌ಪರಿಶೀಲಿಸಿ ಸೂಕ್ತ ಕ್ರಮ:

ಮೀಸಲಾತಿ ಒದಗಿಸಲು ‌ಹಾಗೂ ಪ್ರಮಾಣ ಹೆಚ್ಚಿಸಲು ಬೇಡಿಕೆಗಳು‌ ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನು ‌ತೊಡಕುಗಳು ಇರುವುದರಿಂದ ಅವುಗಳನ್ನು ಗಮನದಲ್ಲಿಟ್ಟುಕೊಂಡು ‌ಯಾವ ರೀತಿಯ ‌ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರಕಾರ ಪರಿಶೀಲಿಸುತ್ತಿದೆ.
ಕಾನೂನು ಇತಿಮಿತಿಗಳನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ವೇದಿಕೆಯ ಮೇಲಿದ್ದ ಶ್ರೀಗಳಿಗೆ ಭರವಸೆಯನ್ನು ನೀಡಿದರು.
ಸಂಗೊಳ್ಳಿ ಸೈನಿಕ ಶಾಲೆಯು ಕೂಡ ಮುಕ್ತಾಯ ಹಂತದಲ್ಲಿದೆ. ರಕ್ಷಣಾ ಇಲಾಖೆಯ ಜತೆ ಚರ್ಚಿಸಿ ಶಾಲೆಯನ್ನು ರಾಜ್ಯ‌ ಸರಕಾರದ‌ ವ್ಯಾಪ್ತಿಗೆ ಸೇರಿಸಿ ಉನ್ನತಮಟ್ಟದ ಮಿಲಿಟರಿ ಶಾಲೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಇಲಾಖೆಯ ಸಚಿವರಾದ ಪ್ರಹ್ಲಾದ ಜೋಶಿ ಅವರು, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ಚೆನ್ನಮ್ಮಳಿಗೆ ಸಿಗಬೇಕಾದ ಮಾನ್ಯತೆ ‌ಇತಿಹಾಸದಲ್ಲಿ‌ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ದೇಶದ‌ ಸ್ವಾತಂತ್ರ್ಯದ ಕಹಳೆ ಊದಿದ ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಸವಿನೆನಪಿನಲ್ಲಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಘೋಷಿಸಬೇಕು; ಮುಂಬೈ‌ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು; ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳನ್ನು ಕಿತ್ತೂರಿನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಕಿತ್ತೂರು ಉತ್ಸವವನ್ನು ರಾಜ್ಯ‌ ಉತ್ಸವವೆಂದು ಘೋಷಿಸಿ ಪ್ರತಿವರ್ಷ ಎರಡು ಕೋಟಿ ರೂಪಾಯಿ ‌ಅನುದಾನ‌ ನೀಡಬೇಕು ಎಂದು ಶಾಸಕ‌ ಮಹಾಂತೇಶ ದೊಡ್ಡಗೌಡರ ಒತ್ತಾಯಿಸಿದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ‌ಅನುದಾನ ಒದಗಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಒಟ್ಟಾರೆ 200 ಕೋಟಿ‌ ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದ್ದರಿಂದ ‌ಮುಂದಿನ‌ ಬಜೆಟ್ ನಲ್ಲಿ 150 ಕೋಟಿ ಅನುದಾನ ಕಲ್ಪಿಸಬೇಕು ಎಂದು ಶಾಸಕ ದೊಡ್ಡಗೌಡರ ಒತ್ತಾಯಿಸಿದರು.

ಕಿತ್ತೂರಿನ ರಾಜಗುರು ಸಂಸ್ಥಾನಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ,
ಹರಿಹರದ ಹರಕ್ಷೇತ್ರದ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಬೆಳ್ಳಿಹಬ್ಬದ ಪ್ರಯುಕ್ತ ಸನ್ಮಾನ:

ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಪ್ರಯುಕ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಗತಿಪರ ರೈತ ಮಹಿಳೆಯಾಗಿರುವ ರಾಯಚೂರು ಜಿಲ್ಲೆಯ ಕವಿತಾಳದ ಶ್ರೀಮತಿ ಕವಿತಾ‌ ಮಿಶ್ರಾ ಹಾಗೂ ರಾಣಿ ಚನ್ನಮ್ಮನ ವಂಶಸ್ಥರಾದ ಬಾಳಾಸಾಹೇಬ್ ದೇಸಾಯಿ(ಕಿತ್ತೂರಕರ) ಅವರನ್ನು ಸನ್ಮಾನಿಸಲಾಯಿತು.

ಕೋವಿಡ್ ನಿಂದ‌ ಮರಣ; ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಣೆ:

ಕೋವಿಡ್ ಸೋಂಕಿನಿಂದ ಮೃತಪಟ್ಟಿರುವವರ ಕುಟುಂಬದವರಿಗೆ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಮೂರು ಜನರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರಧನ ಚೆಕ್ ವಿತರಿಸಿದರು.

ಇದೇ ಸಂದರ್ಭದಲ್ಲಿ ಡಾ.ಸಂತೋಷ ಹಾನಗಲ್ ಅವರು ರಚಿಸಿದ “ಭಾರತದ ಸ್ವಾತಂತ್ರ್ಯದ ‌ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮ” ಕೃತಿಯನ್ನು ಮುಖ್ಯಮಂತ್ರಿ ‌ಬಸವರಾಜ‌ ಬೊಮ್ಮಾಯಿ ಬಿಡುಗಡೆಗೊಳಿಸಿದರು.
ಕಿತ್ತೂರು ಪಟ್ಟಣದಲ್ಲಿ ‌ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಿಗೆ ಸಿಎಂ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅತಿಥಿಗಳಿಗೆ ಪುಸ್ತಕ ನೀಡುವ ಮೂಲಕ ಸ್ವಾಗತಿಸಿದರು.
ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ್ ಕತ್ತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವ ಮುರುಗೇಶ್ ನಿರಾಣಿ, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆ ಉಪ ಸಭಾಧ್ಯಕ್ಷರಾದ ಆನಂದ ಮಾಮನಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿ ಸಂಸದರಾದ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕರ್ನಾಟ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ‌ ಕುಮಠಳ್ಳಿ, ಕಾಡಾ ಅಧ್ಯಕ್ಷರಾದ ಡಾ.ವಿಶ್ವನಾಥ್ ಪಾಟೀಲ, ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ, ರಾಮದುರ್ಗ ಶಾಸಕ‌ ಮಹಾದೇವಪ್ಪ ಯಾದವಾಡ, ಬೈಲಹೊಂಗಲ ಶಾಸಕ ಮಹಾಂತೇಶ‌ ಕೌಜಲಗಿ, ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಾದೇಶಿಕ ‌ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಉತ್ಸವದ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾಂಪ್ರದಾಯಿಕವಾಗಿ ಜರುಗಿದ ಧ್ವಜಾರೋಹಣ, ವೀರಜ್ಯೋತಿ ಸ್ವಾಗತ, ಕಲಾವಾಹಿನಿ ಕಲಾತಂಡಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆದವು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *