ಬೆಳಗಾವಿ- ಬಸವ ತತ್ವದ ಪ್ರಸಾರದ ವಿಚಾರವಾಗಿ ಬೆಳಗಾವಿ ಮಹಾನಗರದಲ್ಲಿ ಅನುಭವ ಮಂಟಪದ ಮಾದರಿಯ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಈ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಅವರು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಅಧಿವೇಶನದ ಕೊಡುಗೆಯಾಗಿ ಅನುಭವ ಮಂಟಪದ ಮಾದರಿಯ ಕಡ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವ ಜೊತೆಗೆ ಬೆಳಗಾವಿ ನಗರದ ಪ್ರಮುಖ ವೃತ್ತಗಳಿಗೆ ಐತಿಹಾಸಿಕ ರೂಪ ನೀಡಲು ಅನುದಾನ ನೀಡುವಂತೆ ಶಾಸಕ ಅನೀಲ ಬೆನಕೆ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತಕ್ಕೆ ವೀರ ರಾಣಿಯ ಇತಿಹಾಸದ ಗತವೈಭವ ಬಿಂಬಿಸುವ ಸುಂದರೀಕರಣ,ರಾಯಣ್ಣನ ವೃತ್ತ,ಅಶೋಕ ವೃತ್ತದ ಸುಂದರೀಕರಣಕ್ಕಾಗಿ ವಿಶೇಷ ಅನುದಾನ ನೀಡಬೇಕೆಂದು ಮನವಿ ಮಾಡಿಕೊಂಡ ಅವರು ಈ ವೃತ್ತಗಳ ಅಭಿವೃದ್ಧಿಗೆ ಕೂಡಲೇ ಯೋಜನೆ ರೂಪಿಸುವಂತೆ ಕೂಡಲೇ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಬೇಕೆಂದು ಸಿಎಂ ಬಳಿ ಮನವಿ ಮಾಡಿಕೊಳ್ಳಲಾಯಿತು.