ಬೆಳಗಾವಿ, ಡಿ.20(ಕರ್ನಾಟಕ ವಾರ್ತೆ): ಗೋಕಾಕ ಹಾಗೂ ಚಿಕ್ಕೋಡಿಯಲ್ಲಿ ರಕ್ತಭಂಡಾರ(ಬ್ಲಡ್ ಬ್ಯಾಂಕ್) ಸ್ಥಾಪನೆಗೆ ಸಂಬಂಧಿಸಿದಂತೆ ಕೂಡಲೇ ಪ್ರಸ್ತಾವನೆ ಕಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ಕೆ.ಎಲ್.ಇ. ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ(ಡಿ.20) ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಸದ್ಯಕ್ಕೆ ಒಂದೇ ಬ್ಲಡ್ ಬ್ಯಾಂಕ್ ಇರುವುದರಿಂದ ಚಿಕ್ಕೋಡಿ ಹಾಗೂ ಗೋಕಾಕ ನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸುವ ಅಗತ್ಯವಿದೆ. ಆದ್ದರಿಂದ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು.
ಜನೌಷಧಿ ಕೇಂದ್ರಗಳ ಮೂಲಕ ಹೆಚ್ಚು ಹೆಚ್ಚು ಜನರಿಗೆ ಕಡಿಮೆ ದರದಲ್ಲಿ ಔಷಧಿ ಲಭಿಸಬೇಕು. ಡಿಎಚ್ಓ ಅವರು ಸೂಕ್ತ ಕ್ರಮ ವಹಿಸಬೇಕು.
ಬಡವರಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ಮಾನ್ಯ ಪ್ರಧಾನಮಂತ್ರಿಗಳು ಜನೌಷಧಿ ಕೇಂದ್ರಗಳನ್ನು ಆರಂಭಿಸಿದ್ದಾರೆ. ಆದ್ದರಿಂದ ಈ ಸೌಲಭ್ಯ ಜನರಿಗೆ ಒದಗಿಸಲು ಮುತುವರ್ಜಿಯಿಂದ ಕೆಲಸ ಮಾಡಬೇಕು.
ಕಳೆದ ಮೂರು ವರ್ಷಗಳ ಅನುದಾನವನ್ನು ಯಾವ ರೀತಿ ಬಳಕೆಯಾಗಿದೆ ಎಂಬುದರ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಪಿಎಚ್ ಸಿ ಭೇಟಿ ಕಡ್ಡಾಯ:
ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಪ್ರತಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಮುಂಬರುವ ದಿನಗಳಲ್ಲಿ ಕಡ್ಡಾಯವಾಗಿ ಡೈರಿಯ ಸಮೇತ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕು ಎಂದು ಸಚಿವ ಡಾ.ಸುಧಾಕರ್ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಭೇಟಿಗೆ ಸಂಬಂಧಿಸಿದಂತೆ ಛಾಯಾಚಿತ್ರಗಳು ಹಾಗೂ ವರದಿಯನ್ನು ಅಪ್ಲೋಡ್ ಮಾಡಬೇಕು.
ಡಯಾಲಿಸಿಸ್ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ಅನುಕೂಲವಾಗುವಂತೆ ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ನಿರ್ದೇಶನ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ತಪ್ಪದೇ ಗೌರವಧನ ಬಿಡುಗಡೆ ಮಾಡಬೇಕು. ಆಶಾ ಕಾರ್ಯಕರ್ತೆಯರು ತಳಮಟ್ಟದಲ್ಲಿ ಅತ್ಯಂತ ಶ್ರಮದಾಯಕ ಕೆಲಸ ಮಾಡುವುದರಿಂದ ಅವರಿಗೆ ವೇತನ ಬಿಡುಗಡೆ ವಿಳಂಬ ಮಾಡಬಾರದು ಎಂದರು.
ಔಷಧ ಬಳಕೆ ಮತ್ತು ಇಂಡೆಂಟ್ ಬಗ್ಗೆ ಔಷಧ ಸಾಫ್ಟ್‌ವೇರ್ ನಲ್ಲಿ ಅಪ್ಲೋಡ್ ಮಾಡಬೇಕು. ಔಷಧ ಪೋರ್ಟಲ್ ನಲ್ಲಿ ನಿಯಮಿತವಾಗಿ ಮಾಹಿತಿಯನ್ನು ಅಪ್ಲೋಡ್ ಮಾಡಿದಾಗ ಮಾತ್ರ ಅಗತ್ಯ ಔಷಧಿ ಖರೀದಿಗೆ ಅನುಕೂಲವಾಗಲಿದೆ. ಆದ್ದರಿಂದ ಕಡ್ಡಾಯವಾಗಿ ಔಷಧ ಸಾಫ್ಟ್‌ವೇರ್ ಬಳಕೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ಮಾಹಿತಿಯನ್ನು ದಾಖಲಿಸುವ ಬಗ್ಗೆ ತರಬೇತಿಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನ, ಬಯೋ ವೇಸ್ಟ್ ನಿರ್ವಹಣೆ, ಡಯಲಿಸಿಸ್ ವ್ಯವಸ್ಥೆ, ಔಷಧಿ ದಾಸ್ತಾನು-ಖರೀದಿ, ಎಂ.ಆರ್.ಐ.-ಸಿಟಿ ಸ್ಕ್ಯಾನ್ ಸೌಲಭ್ಯ, ಸಿಬ್ಬಂದಿ ವೇತನ, ವೈದ್ಯಕೀಯ ಉಪಕರಣಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಸಿಸೇರಿಯನ್ ಪ್ರಮಾಣ ಶೇ.15 ಮೀರಬಾರದು:
ಸರಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಶೇ.15 ಕ್ಕಿಂತ ಕಡಿಮೆ ಇರಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಒಟ್ಟಾರೆ ಹೆರಿಗೆಗಳ ಪೈಕಿ ಶೇ.15 ಕ್ಕಿಂತ ಅಧಿಕ ಸಿಸೇರಿಯನ್ ಮಾಡಲಾಗುತ್ತಿರುವ ಆಸ್ಪತ್ರೆಗಳ ಬಗ್ಗೆ ಗಮನಹರಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಆಕ್ಸಿಜನ್ ಸೌಲಭ್ಯ ಹಾಗೂ ಇತರೆ ತುರ್ತು ಚಿಕಿತ್ಸೆ ಒದಗಿಸಲು ಹೆಚ್ಚಿನ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದು ಡಿಎಚ್ಓ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.
ಆರೋಗ್ಯ ಇಲಾಖೆಯ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆರೋಗ್ಯ ಇಲಾಖೆಯ ಆಯುಕ್ತರಾದ ಡಿ.ರಣದೀಪ್, ನಿರ್ದೇಶಕ ಡಾ.ಅಪ್ಪಾಸಾಹೇಬ್ ನರಟ್ಟಿ ಸೇರಿದಂತೆ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*****