ಬೆಳಗಾವಿ: ಅಪಘಾತದಲ್ಲಿ ಗಾಯಗೊಂಡು ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನ್ಯೂಸ್ ಫಸ್ಟ್ ಕ್ಯಾಮರಾಮನ್ ಸಚಿನ ಲಕ್ಷ್ಮಣ ಜಮಖಂಡಿಯವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರಕಾರದಿಂದ ಭರಿಸುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದಿಲೀಪ ಕುರುಂದವಾಡಿಯವರ ನೇತೃತ್ವದಲ್ಲಿ ಸಂಘದ ಸದಸ್ಯರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಬೆಳಗಾವಿಯಲ್ಲಿ ಗುರುವಾರದಂದು ಭೇಟಿಯಾಗಿ ಅಪಘಾತದಲ್ಲಿ ಗಾಯಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ಟಿವಿ ಚಾನಲ್ ಕ್ಯಾಮರಾಮನ್ ಸಚಿನ ಆರೋಗ್ಯಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಸಂಘದ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ಕರೆದು ಕೂಡಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿನ ಜಮಖಂಡಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಲು ಮಾರ್ಗದರ್ಶನ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ನಿಮಿತ್ಯ ಕಚೇರಿ ಕೆಲಸವನ್ನು ಮುಗಿಸಿಕೊಂಡು ದ್ವಿಚಕ್ರ ವಾಹನದ ಮೇಲೆ ಬರುವಾಗ ಸಚಿನಗೆ ನೀರಾವರಿ ಇಲಾಖೆಯ ಜೀಪ್ ಡಿಕ್ಕಿಯಾಗಿ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈಗಾಗಲೆ ಕಾಲಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಮೊತ್ತೊಂದು ಬಾರಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿರುವದರಿಂದ ಸಚಿನ್ ವರು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಭೀಮಶಿ ಜಾರಕಿಹೊಳಿಯವರಿಗೆ ಮನವಿ ಮಾಡಿ ಸಹಾಯ ಮಾಡುವಂತೆ ವಿನಂತಿಸಿದ್ದರು.
ಜಿಲ್ಲಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿಯವರ ಸೂಚನೆಯ ಮೇರೆಗೆ ಗುರುವಾರದಂದು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗಾಯಗೊಂಡ ಪತ್ರಕರ್ತನಿಗೆ ಸಹಾಯ ಮಾಡುವಂತೆ ಮನವಿಸಿದ್ದರು. ಪತ್ರಕರ್ತರಾದ ಶ್ರೀಕಾಂತ ಕುಬಕಡ್ಡಿ, ಶ್ರೀಧರ ಕೊಟಾರಗಸ್ತಿ, ಚಂದ್ರಕಾಂತ ಸುಗಂಧಿ, ಸಹದೇವ ಮಾನೆ, ಮಂಜುನಾಥ ಪಾಟೀಲ, ಮಹಾಂತೇಶ ಕುರಬೆಟ್, ಜಿತೇಂದ್ರ ಕಾಂಬಳೆ ಹಾಗೂ ಪತ್ರಕರ್ತರು ಮತ್ತು ಕ್ಯಾಮರಾಮನ್‌ಗಳು ಉಪಸ್ಥಿತರಿದ್ದರು.
****
ಫೋಟೋ ಶೀರ್ಷಿಕೆ ೨೩ಬೆಳಗಾವಿ೧
ಅಪಘಾತದಲ್ಲಿ ತೀವ್ರ ಗಾಯಗೊಂಡ ಸಚಿನ ಜಮಖಂಡಿಯ ಶಸ್ತ್ರ ಚಿಕಿತ್ಸೆಗೆ ಸೂಕ್ತ ಪರಿಹಾರ ನೀಡಬೇಕೆಂದು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಧಾನ ಕಾರ್ಯದರ್ಶಿ ದಿಲೀಪ ಕುರುಂದವಾಡಿಯವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.