Breaking News

ಪತ್ರಕರ್ತರಿಗೆ ಹೈಟೆಕ್ ಕಾಲೋನಿ ನಿರ್ಮಾಣ: ಶಾಸಕ ಅಭಯ್ ಪಾಟೀಲ ಭರವಸೆ

ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಹೈಟೆಕ್ ಕಾಲೋನಿ ನಿರ್ಮಾಣ: ಶಾಸಕ ಅಭಯ್ ಪಾಟೀಲ ಭರವಸೆ

ಬೆಳಗಾವಿ, ಫೆ.13(ಕರ್ನಾಟಕ ವಾರ್ತೆ): ಮುಂದಿನ ಮೂರು ತಿಂಗಳಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ನೂತನ ವಸತಿ ಯೋಜನೆಯಲ್ಲಿ ನೂರಕ್ಕೂ ಅಧಿಕ ಪತ್ರಕರ್ತರಿಗೆ ನಿವೇಶನ ಒದಗಿಸಲು ನಿರ್ಧರಿಸಲಾಗಿದ್ದು, ಬುಡಾ ನಿವೇಶನದಲ್ಲಿ ಪತ್ರಕರ್ತರಿಗೆ ಪ್ರತ್ಯೇಕ ಹಾಗೂ ಹೈಟೆಕ್ ಕಾಲೋನಿ ನಿರ್ಮಿಸಲಾಗುವುದು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಭರವಸೆ ನೀಡಿದರು.

ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಭಾನುವಾರ (ಫೆ.13) ನಡೆದ ಮಾಧ್ಯಮ ಪ್ರತಿನಿಧಿಗಳ ಆರೋಗ್ಯ ವಿಮಾ ಕಾರ್ಡು‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಪತ್ರಕರ್ತರಿಗೆ ಹಾಗೂ ಕುಟುಂಬದವರಿಗೆ ಆರೋಗ್ಯ ವಿಮಾ ಒದಗಿಸಿರುವುದು ವಿನೂತನ ಕಾರ್ಯಕ್ರಮವಾಗಿದೆ.
ಕೋವಿಡ್ ಸೇರಿದಂತೆ ಬಹುತೇಕ ಸಂದರ್ಭಗಳಲ್ಲಿ ಪತ್ರಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ವೈದ್ಯರು ಮಾತ್ರವಲ್ಲ; ಜನರ ಜೀವ ರಕ್ಷಿಸಲು ಮಾಧ್ಯಮ ಪ್ರತಿನಿಧಿಗಳು ಕೂಡ ಕೆಲಸ ಮಾಡಿದ್ದಾರೆ. ವೈದ್ಯಕೀಯ ವ್ಯವಸ್ಥೆಯ ನ್ಯೂನ್ಯತೆಗಳ ಬಗ್ಗೆ ಸರಕಾರದ ಗಮನ ಸೆಳೆದು ಜನರ ಪ್ರಾಣ ರಕ್ಷಿಸಿದ್ದಾರೆ ಎಂದು ಶಾಸಕ‌ ಅಭಯ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಿಕಾ ಭವನ ನಿರ್ಮಾಣಕ್ಕೆ 20 ಲಕ್ಷ ನೆರವು-ಭರವಸೆ:

ಬೆಳಗಾವಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಜಾಗೆಯನ್ನು ಅಂತಿಮಗೊಳಿಸಿದರೆ ತಾವು ಹಾಗೂ ಶಾಸಕ ಅನಿಲ್ ಬೆನಕೆ ತಲಾ ಹತ್ತು ಲಕ್ಷ ರೂಪಾಯಿ ಅನುದಾನ ನೆರವು ನೀಡುವುದಾಗಿ ಶಾಸಕ ಅಭಯ್ ಪಾಟೀಲ ಭರವಸೆ ನೀಡಿದರು. ಈಗಾಗಲೇ ಲಭ್ಯವಿರುವ ಅಥವಾ ಹೊಸ ಜಾಗೆಯನ್ನು ಕೂಡಲೇ ಅಂತಿಮಗೊಳಿಸುವಂತೆ‌ ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾತನಾಡಿ, “ಕೋವಿಡ್ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಉತ್ತಮ ಕಾರ್ಯ ಮಾಡಿದ್ದಾರೆ. ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಪಿಸುವ ಮೂಲಕ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅನುಕೂಲವಾಗುವಂತೆ ಆರೋಗ್ಯ ವಿಮೆ ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.

ಎಲ್ಲರಿಗೂ ಅನುಕೂಲವಾಗುವಂತೆ ಆರೋಗ್ಯ ವಿಮೆ ಜಾರಿಗೊಳಿಸಲಾಗಿದೆ. ವರ್ಷದಲ್ಲಿ ಮೂರು ಲಕ್ಷ ರೂಪಾಯಿ ಗಳವರೆಗೆ ವೈದ್ಯಕೀಯ ವೆಚ್ಚವನ್ನು ಕಂಪನಿ ಭರಿಸಲಿದೆ. ಪ್ರತಿವರ್ಷ ಈ ಯೋಜನೆ ಮುಂದುವರಿಯಲಿದೆ.
ವಾರ್ತಾ ಇಲಾಖೆಯಿಂದ ಮಾನ್ಯತಾ ಕಾರ್ಡು ಹೊಂದಿದವರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸಲಾಗಿದೆ. ಮಾನ್ಯತಾ ಕಾರ್ಡು ಹೊಂದಿದ ಕೆಲವರು ಈ ಸೌಲಭ್ಯ ಪಡೆದಿಲ್ಲ. ಅವರಿಗೂ ಕೂಡ ಕಾರ್ಡುಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾ ಭವನ; ಶೀಘ್ರ ನಿವೇಶನ ಅಂತಿಮ:

ಬೆಳಗಾವಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಗುರುತಿಸಿ ಹದಿನೈದು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಭರವಸೆ ನೀಡಿದರು.

ಇದಕ್ಕೂ ಮುಂಚೆ ಆರೋಗ್ಯ ಕಾರ್ಡುಗಳನ್ನು ವಿತರಿಸಿ ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರು, “ಪತ್ರಕರ್ತರ ಜತೆಗೆ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವ ಮಾದರಿ ಯೋಜನೆ ಆರಂಭಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಈಗಾಗಲೇ ನೋಂದಣಿ ಮಾಡಿಕೊಳ್ಳದಿರುವ ಪ್ರತಿನಿಧಿಗಳು ವಾರ್ತಾ ಇಲಾಖೆಯ ಮೂಲಕ ನೋಂದಣಿ ಮಾಡಿಕೊಳ್ಳಬೇಕು” ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು, ಆರೋಗ್ಯ ವಿಮೆ ಮೂಲಕ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತಿದೆ.
ಬೆಳಗಾವಿ ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.

ಆರೋಗ್ಯ ವಿಮಾ ಕಾರ್ಡುಗಳ ಅನುಕೂಲತೆಗಳ ಕುರಿತು ಮಾಹಿತಿಯನ್ನು ನೀಡಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ಬೆಳಗಾವಿಯ ನೋಂದಾಯಿತ 27 ಪ್ರಮುಖ ಆಸ್ಪತ್ರೆಗಳಲ್ಲಿ ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರು ನಗದುರಹಿತ ಚಿಕಿತ್ಸೆಯನ್ನು ಪಡೆಯಬಹುದು ಎಂದು ಹೇಳಿದರು.

ಇದಲ್ಲದೇ ರಾಜ್ಯದಾದ್ಯಂತ 1033 ಆಸ್ಪತ್ರೆಗಳಲ್ಲಿ ಕೂಡ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಎಂಪ್ಯಾನಲ್ಡ್ ಮಾಡದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೆ 30 ದಿನಗಳ ಒಳಗಾಗಿ ಆಸ್ಪತ್ರೆಯ ವೆಚ್ಚವನ್ನು ಮರುಪಾವತಿಗಾಗಿ ವಿಮಾ ಕಂಪನಿಗೆ ಕ್ಲೇಮ್ ಮಾಡಬಹುದು ಎಂದರು.
ಪ್ರತಿ ಕುಟುಂಬಕ್ಕೆ 3 ಲಕ್ಷ ರೂಪಾಯಿ ನಿಗದಿಪಡಿಸಲಾಗಿರುತ್ತದೆ. ಸದರಿ ವಿಮೆಯಲ್ಲಿ ಗಂಡ/ಹೆಂಡತಿ, ಮಕ್ಕಳು ಮತ್ತು ಪೋಷಕರಿಗೆ ಆರೋಗ್ಯ ವಿಮೆ ಸೌಲಭ್ಯ ಇರುತ್ತದೆ ಎಂದು ಡಾ.ಡುಮ್ಮಗೋಳ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಪರವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ ಹಾಗೂ ಮುರುಗೇಶ್ ಶಿವಪೂಜಿ ಅವರು, ಸದಾ‌ ಸಮಾಜದ ಒಳಿತಿಗಾಗಿ ಶ್ರಮಿಸುವ ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯ ರಕ್ಷಣೆಗೆ ವಿಮಾ‌ ಮಾಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪತ್ರಕರ್ತರ ಹಿತರಕ್ಷಣೆ ನಿಟ್ಟಿನಲ್ಲಿ ಇಂತಹ ವಿನೂತನ ‌ಯೋಜನೆ ರೂಪಿಸಿದ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಯ ಆಯುಕ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮಾನ್ಯತಾ ಕಾರ್ಡು ಹೊಂದಿರದ ಪತ್ರಕರ್ತರಿಗೂ ಈ ಸೌಲಭ್ಯ ವಿಸ್ತರಣೆ; ಬುಡಾ ವತಿಯಿಂದ ನಿವೇಶನ ಹಂಚಿಕೆ ಹಾಗೂ ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಮಹಾನಗರ ಪಾಲಿಕೆಯವ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಾನ್ಯತಾ ಕಾರ್ಡು ಹೊಂದಿರುವ 56 ಪತ್ರಕರ್ತರು ಹಾಗೂ ಅವರ ಕುಟುಂಬದ 168 ಜನರಿಗೆ ಆರೋಗ್ಯ ವಿಮಾ ಕಾರ್ಡುಗಳನ್ನು ವಿತರಿಸಲಾಯಿತು.
******

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *