ಎರಡು ವರ್ಷದ ಹಿಂದೆ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಈಗ ಮತ್ತೆ ಅತ್ಯಾಚಾರ ನಡೆದಿದೆ. ಈ ಅಸ್ವಸ್ಥ ಮಹಿಳೆ ಗರ್ಭಿಣಿಯಾಗಿ ಜಿಲ್ಲಾ ಆಸ್ಪತ್ರೆಗೆ ಸೇರ್ಪಡೆಯಾಗಿದ್ದಾಳೆ. ಈ ಹಿಂದೆಯೂ ಅತ್ಯಾಚಾರ ಪ್ರಕರಣ ದಾಖಲು ಆಗಿರಲಿಲ್ಲ ,ಈ ಮಹಿಳೆ ಗರ್ಭಿಣಿ ಯಾಗಿ ಆಸ್ಪತ್ರೆ ಸೇರಿ ವಾರ ಕಳೆದರೂ ಇನ್ನೂವರೆಗೆ ಅತ್ಯಾಚಾರ ಪ್ರಕರಣ ದಾಖಲು ಆಗಿಲ್ಲ.
ವಿಶೇಷ ವರದಿ (ಮೆಹಬೂಬ ಮಕಾನದಾರ)
ಬೆಳಗಾವಿ-
ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳು ಇಂದು ಸಾಮಾನ್ಯವೆನ್ನುವಂತಾಗಿವೆ. ಮನುಷ್ಯತ್ವ ಕಳೆದುಕೊಂಡು ವರ್ಗ ಹೇಸಿಗೆ ತರಿಸುವಷ್ಟರ ಮಟ್ಟಿಗೆ ಅಮಾನವೀಯ ಘಟನೆಗಳು ಒಪ್ಪಿತ ಮಾಲ್ಯ ಎನ್ನುವಂತೆ ನಿತ್ಯ ಅಟ್ಟಹಾಸ ಮೆರೆಯುತ್ತಿದೆ. ಇದನ್ನು ಪ್ರಶ್ನಿಸುವ ಮನಸ್ಸುತ್ವದ ಮನಸ್ಸುಗಳು ಹೇಸಿಗೆ ಎದ್ದಿದ್ದು ನೋಣಗಳು ಮುಕರಿ ನೆಕ್ಕುತ್ತಿವೆ. ನ್ಯಾಯ ಒದಗಿಸಬೇಕಾದ ಕುರುಡು ವ್ಯವಸ್ಥೆಗೆ ಇದಾವುದೂ ಕಣ್ಣಿಗೆ ಕಾಣುವುದಿಲ್ಲ; ಮನಸ್ಸಿಗೆ ತಾಗುವುದಿಲ್ಲ. ಆದರೆ, ಅಲ್ಲಲ್ಲ ಹಿಡಿಯಷ್ಟು ಉಳಿದಿರುವ ಮನುಷ್ಯಪ್ರೀತಿಗೆ ಮಾತ್ರ ನೋವಾಗುವುದು ಸಹಜ. ಇದಕ್ಕೊಂದು ಕಿರಿಟಪ್ರಾಯವಾಗಿ ಇದೇ ಕುಂದಾನಗರಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೋರ್ವಳ ನಾಚಿಕೆಗಟ್ಟ ಪುರುಷ ವರ್ಗದಿಂದ ಸಾಕ್ಷಿ ಒದಗಿಸಿದೆ!
ವಿಚಾರ ಶಕ್ತಿಯನ್ನೇ ಕಳೆದುಕೊಂಡು ಬೀದಿ ಬೀದಿ ತಿರುಗುವ ಸುಮಾರು ೩೦ ವರ್ಷ ಮಯಸ್ಸು ಆಸುಪಾಸಿನ ಮಹಿಳೆಯ ಮೇಲೆ ನಿರಂತರ ಲೈಂಗಿಕ ಶೋಷಣೆ ಎಸಗಿ ಪರುಷ ಶ್ರೇಷ್ಠತ್ವ ಮೆರೆದಿರುವುದೇ ಪ್ರಜ್ಞಾವಲಯ ತಲೆತಗ್ಗಿಸುವ ಘಟನೆ. ಒಂದಲ್ಲ ಎರಡು ಬಾರಿ ಈ ಮಹಿಳೆನ್ನು ಗರ್ಭಿನಿಯನ್ನಾಗಿಸಿದ ಇದೇ ಪರುಷ ಸಮಾಜ ಈ ಅನಾಥ ಮಹಿಳೆಯ ದೇಹದ ಮೇಲೆ ಪುರುಷತ್ವದ ಅಟ್ಟಹಾಸ ಮೇರೆದು ದಾಹ ತೀರಿಸಿಕೊಂಡಿದೆ. ಬೆಳಗಾವಿ ನಗರ ಸೇರಿದಂತೆ ನಗರದ ಹೊರ ಒವಲಯದ ಪ್ರದೇಶಗಳಲ್ಲಿ ಬೀದಿ ಬೀದಿ ಸುತ್ತಾಡಿ ಜೀವಿಸುವ ಈ ಅಸಹಾಯಕ ಮಹಿಳೆ ಪುರುಷನ ಕಾಮದಾಹ ಬಲಿಪಶುವಾಗಿ ನರುಳುತ್ತ ಬದುಕಿದ್ದಾಳೆ. ಒಂದಲ್ಲ ಎರಡು ಬಾರಿ ಮನುಷ್ಯತ್ವ ಕಳೆದುಕೊಂಡು ಪುರುಷ ವರ್ಗ ಈ ಅಸಹಾಯಕ ಮಹಿಳೆಯನ್ನು ಗರ್ಭಿನಿಯನ್ನಾಗಿಸಿ ಸಾಧನೆ ಮೆರೆದಿದೆ.
ಈ ಹಿಂದೆ ೨೦೨೦ ಜುಲೈ ತಿಂಗಳಿನಲ್ಲಿ ಬೆಳಗಾವಿ ಹೊರವಲಯದ ಕಾಕತಿ ಪೊಲೀಸರ ಕೈಗೆ ಈ ಮಹಿಳೆ ಸಿಕ್ಕಾಗ ಹೊಟ್ಟೆನೋವು ಎಂದು ಬರಳುತ್ತಿದ್ದಳು. ಅನಾಥ ಮಹಿಳೆಯನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಚಿಕಿತ್ಸೆಗೆ ಒಳಪಡಿಸಿದಾಗ ಗರ್ಭಿಣಿಯಾಗಿರುವ ಸತ್ಯ ಬೆಳಕಿಗೆ ಬರುತ್ತದೆ. ನಂತರ ಆಸ್ಪತ್ರೆಯ ಆರೈಕೆಯಲ್ಲಿ ಮಗುವೊಂದಕ್ಕೆ ಜನ್ಮ ನೀಡಿ, ತಾನು ಮಗುವೊಂದರ ತಾಯಿ ಎಂಬ ಪ್ರಜ್ಞೆಯಿಲ್ಲದೆ ಇದೇ ನಾಗರಿಕ ಸಮಾಜದ ಬೀದಿಗೆ ಬರುತ್ತಾಳೆ. ಆ ಘಟನೆ ಸಂಭವಿಸಿ ಈಗ ಎರಡು ವರ್ಷಗಳು ಗತಿಸಿವೆ. ಅದೇ ಸಮಾಜದ ಬೀದಿಯಿಂದ ತಾನೊಂದು ಹೆಣ್ಣು, ತನಗೂ ಬಯಕೆಗಳಿವೆ, ತನಗೊಂದು ವ್ಯಕ್ತಿತ್ವವಿದೆ ಎಂಬ ಯಾವ ಪ್ರಜ್ಞೆಯಿಲ್ಲದೆ, ತಾನೊಂದು ಮನುಷ್ಯ ವರ್ಗಕ್ಕೆ ಸೇರಿದವಳು ಎಂಬ ಅರಿವನ್ನು ಕಳೆದುಕೊಂಡು, ಇದೇ ನಾಗರಿಕ ಸಮಾಜದ ನಿರಂತರ ಶೋಷಣೆಯ ಗುರುತು ಹೊತ್ತುಕೊಂಡು ಮತ್ತೇ ಆಸ್ಪತ್ರೆ ಸೇರಿದ್ದಾಳೆ. ತಾಯತನದ ಪ್ರಜ್ಞೆ ಕಳೆದುಕೊಂಡು ಈ ಮಹಿಳೆ ಕೆಲ ದಿನಗಳ ನಂತರ ಈ ಮಹಿಳೆ ಮತ್ತೇ ಮನುಷತ್ವ ಕಳೆದುಕೊಂಡ ಸಮಾಜಕ್ಕೆ ಮತ್ತೊಂದು ಮಗುವಿನ ಕಾಣಿಕೆ ನೀಡಿ, ಇದೇ ಸಮಾಜದ ಬೀದಿಗೆ ಬರಲಿದ್ದಾಳೆ. ಈ ರೀತಿ ಇನ್ನೂ ಎಷ್ಟುಸಲ ಈ ಹೇಸಿಕೆ ಸಮಾಜದ ಸಾಧನೆಯ ಹೆಗ್ಗುರುತು ಹೊತ್ತು ಬರುವವಳೋ ಲೆಕ್ಕವಿಲ್ಲ. ಏಕೆಂದರೆ, ಈ ಮಾನಸಿಕ ಅಸ್ವಸ್ಥೆಯ ದೇಹದ ಮೇಲೆ ನಡೆದಿರುವ ಪರುಷತ್ವದ ಅಟ್ಟಹಾಸ ಕಂಡುಕೊಳ್ಳುವ ಮನಸ್ಥಿತಿ ನಮ್ಮ ಪೊಲೀಸ್ ವ್ಯವಸ್ಥೆಗೆ ಇಲ್ಲದಾಗಿದೆ.
ಹಿರೇಬಾಗೆವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಹೊಟ್ಟೆನೋವು ಎಂದು ನರಳುತ್ತಿದ್ದ ಈ ನತದೃಷ್ಟ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿರಂತರ ಬಲತ್ಕಾರಕ್ಕೆ ಒಳಗಾದ ಈ ಮಹಿಳೆ ಎರಡನೇ ಸಲ ಗರ್ಭಿನಿಯಾಗಿ ಮತ್ತೇ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಗ ಮತ್ತೊಂದು ಮಗುವಿಗೆ ಕಾಣಿಕೆ ನೀಡಿ, ಅನಾಥ ಮಕ್ಕಳ ಅನಾಥ ತಾಯಿಯಾಗಿ ಈ ನಾಗರಿಕ ಸಮಾಜದಲ್ಲಿ ಜೀವಿಸಲಿದ್ದಾಳೆ.
ಮೊದಲಸಲ ಅತ್ಯಾಚಾರಕ್ಕೆ ಒಳಗಾದಾಗಲೇ ಈ ಮಹಿಳೆಗೆ ಸರಿಯಾದ ಆರೈಕೆ ನೀಡಿ, ಯಾರು ಅತ್ಯಾಚಾರ ಎಸಗಿದ್ದಾರೆ ಎಂಬುದನ್ನು ನಮ್ಮ ಪೊಲೀಸರು ಕಂಡುಕೊಂಡಿದ್ದರೆ ಈ ಮಹಿಳೆ ಮತ್ತೊಮ್ಮೆ ಶೋಷಣೆಯ ನರಳಾಟದಲ್ಲಿ ಒದ್ದಾಡುವ ಪರಿಸ್ಥಿತಿ ಬರುತ್ತಿರಿಲ್ಲ. ಅನಾಥ, ಮಾನಸಿಕ ಅಸ್ವಸ್ಥೆ ಎಂದು ಬೇಜವಾಬ್ದಾರಿ ಮೆರೆದ ಪೊಲೀಸ್ ವ್ಯವಸ್ಥೆ ಕಾರ್ಯ ತಲೆ ತಗ್ಗಿಸುವಂತಹದಾಗಿದೆ.
ಇನ್ನಾದರೂ ಪೊಲೀಸರು ಈ ಅನಾಥ ಮಹಿಳೆಗೆ ಶೋಷಣೆಗೆ ಎಸಗಿ ಮೆರೆದ ಪುರುಷನನ್ನು ಪತ್ತೇ ಹಚ್ಚಿ ʼನ್ಯಾಯʼವೆಂದು ಅರಿಯದ ಮಹಿಳೆಗೆ, ಅನಾಥ ಮಕ್ಕಳಿಗೆ ನ್ಯಾಯ ಕೊಡಿಸುವ ಮನುಷ್ಯತ್ವ ತೊರುವಂತಾಗಲಿ; ಅಸ್ವಸ್ಥ ಮಹಿಳೆಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ, ಮನುಷ್ಯಳಾಗಿ ಜೀವಿಸುವಂತೆ ಆಗಲಿ ಎಂದು ಬೆಳಗಾವಿ ಸುದ್ಧಿ ಡಾಟ್ ಕಾಮ್ ಕಳಕಳಿಯಿಂದ ಆಶಿಸುತ್ತದೆ.
*****