ಬೆಳಗಾವಿ
ಜಿಲ್ಲೆಯ ಭ್ರಷ್ಟಾಚಾರ ಪ್ರಕರಣಗಳಲ್ಲಿ 9 ವರ್ಷ ಕಳೆದರೂ ಆರೋಪಿತರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುವಂತೆ ಆಗ್ರಹಿಸಿ ಸೋಮವಾರ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಸಿಬಿ ಎಸ್ಪಿ ಮೂಲಕ ಎಸಿಬಿ ಮುಖ್ಯಸ್ಥರಿಗೆ ಮನವಿ ರವಾನಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಭ್ರಷ್ಟಾಚಾರ, ಅಕ್ರಮ ಆಸ್ತಿ ಕಬಳಿಕೆ ಮಾಡಿರುವ ದೂರು ನೀಡಿದ 9 ವರ್ಷ ಕಳೆದರೂ ಬೆಳಗಾವಿ ಎಸಿಬಿ ( ಭ್ರಷ್ಟಾಚಾರ ನಿಗ್ರಹ ದಳ) ಇಲ್ಲಿಯವರೆಗೂ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ.ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿಗಳಿಗೆ ಭ್ರಷ್ಟಾಚಾರ ಪ್ರಕರಣಗಳನ್ನು ಬಿಟ್ಟರೆ ಬೇರೆ ಯಾವ ಕೆಲಸ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ದೂರು ಸಲ್ಲಿಸಿ ಆರು ತಿಂಗಳ ಒಳಗಾಗಿ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದ್ದ ಎಸಿಬಿ ಅಧಿಕಾರಿಗಳೇ ಭ್ರಷ್ಟಾಚಾರ ಮಾಡುವ ರಾಜಕಾರಣಿಗಳ ರಕ್ಷಣೆ ನೀಡುತ್ತಿರುವುದು ದುರಂತದ ಸಂಗತಿ. ಸಣ್ಣ ಸಣ್ಣ ಭ್ರಷ್ಟಾಚಾರದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುವ ಎಸಿಬಿ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಭೂ ಕಬಳಿಕೆ ಹಾಗೂ ಭ್ರಷ್ಟಾಚಾರ ನಡೆಸಿರುವ ಬಿಜೆಪಿ ರಾಜಕಾರಣಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ಹಿಂದೆಟ್ಟು ಹಾಕುತ್ತಿರುವುದು ಖಂಡನೀಯ. ಒಂದು ವಾರದ ಒಳಗಾಗಿ 9 ವರ್ಷಗಳ ಭ್ರಷ್ಟಾಚಾರ ದೂರುಗಳಿಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಜಿಲ್ಲಾಧ್ಯಕ್ಣ ವಿಜಯ ಪಾಟೀಲ, ಅನಿಸ್ ಸೌದಾಗರ, ರೀಜವಾನ್ ಮಕಾನದಾರ, ಬಶೀರ ಅಹ್ಮದ ಜಮಾದಾರ, ಮಹಾವೀರ ಅನಗೋಳ, ಇಮ್ರಾನ್ ಜಮಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.