*;
*”ಕಲಿಕೆ ಹೆಸರಿನಲ್ಲಿ ಮಕ್ಕಳ ಸಹಜ ಬಿಡುವು ಕಸಿದುಕೊಳ್ಳುತ್ತಿರುವ ಶೈಕ್ಷಣಿಕ ವ್ಯವಸ್ಥೆ”*
ಪ್ರಸಕ್ತ ಶೈಕ್ಷಣಿಕ ಸಾಲಿನ ಪಿಯುಸಿ ದ್ವಿತೀಯ ವರ್ಣದ ಪೂರ್ವಭಾವಿ ಪರೀಕ್ಷೆಗಳು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಆರಂಭವಾಗಿದ್ದು, ಹೋಳಿ ಹಬ್ಬದ ಓಕುಳಿಯ ದಿನದವಾದ ಇಂದು ಸಹಿತ ರಸಾಯನಶಾಸ್ತ್ರ ಹಾಗು ಸಂಖ್ಯಾಶಾಸ್ತ್ರ ಪರೀಕ್ಷೆಗಳು ಮುಂಜಾನೆ 9 ಗಂಟೆಯಿಂದ ಆರಂಭವಾಗಿವೆ.
ಹಬ್ಬ ಹರಿದಿನಗಳು ಪರಸ್ಪರ ಮನಷ್ಯ ಸಂಬಂಧಗಳನ್ನು ಬೆಸೆಯುವ, ಮನುಷ್ಯ ಪ್ರೀತಿ ಹೆಚ್ಚಿಸುವ, ಆ ಮೂಲಕ ಮಾನಸಿಕ ಸ್ಥಿತಿಯನ್ನು ವಿಕಸಿಸುವುದಕ್ಕೆ ಕಾರಣವಾಗುತ್ತವೆ. (ಹಬ್ಬಗಳು ಧರ್ಮ, ಜಾತಿಗಳ ಸಂಕೇತಗಳಾಗುತ್ತಿರುವುದು ಅವುಗಳ ಇನ್ನೊಂದು ದುರಂತ ಬೆಳವಣಿಗೆ) ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಹಬ್ಬ ಹರಿದಿನಗಳ ಸ್ಪರ್ಶ ಮಕ್ಕಳಿಗೆ ಲಭಿಸದಂತಾಗಿದೆ. ಇಂದು ಹೋಳಿ ಹಬ್ಬದ ಓಕುಳಿಯ ಸಂಭ್ರಮ. ಜಾತಿ,ಮತ, ಪಂಥಗಳ ಮಿತಿಗಳನ್ನು ದಾಟಿ ಮನುಷ್ಯ ಪ್ರೀತಿ – ಸಂಭ್ರಮದಲ್ಲಿ ತೇಲಾಡುವ ಬಣ್ಣದ ಬದುಕಿನ ಸಂಭ್ರಮ. ಕೋವಿಡ್ ನಿಂದಾಗಿ ಕಳೆದ ಮೂರು ವರ್ಷಗಳಿಂದ ಮಕ್ಕಳು ಸೇರಿದಂತೆ ಎಲ್ಲರೂ ಕಳೆದುಕೊಂಡಿದ್ದು, ಅದ್ಹೇಗೋ ಈ ವರ್ಷ ಗರಿಬಿಚ್ಚಿಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಓಕುಳಿ ಸಂಭ್ರಮಕ್ಕೆ ಸಂಪ್ರದಾಯದ ಪ್ರಕಾರ ರಜೆ ಕೊಡಬೇಕಾದದುನ್ನು ಸ್ಥಗಿತಗೊಳಿಸಿ ಪಿಯುಸಿ ವಿದ್ಯರ್ಥಿಗಳನ್ನು ಪರೀಕ್ಷೆಯ ಕೊಠಡಿಗಳಲ್ಲಿ ದೂಡಲಾಗಿದೆ; ಆ ಮೂಲಕ ಸಾಮರಸ್ಯದ ಸಂಭ್ರಮವನ್ನು ಶಿಕ್ಷಣ ಇಲಾಖೆ ಕಸಿದುಕೊಂಡಿದೆ.
ಕೋವಿಡ್ ನೆಪದಲ್ಲಿ ಕಳೆದ ಮೂರು ವರ್ಷಗಳಿಂದ ಶೈಕ್ಷಣಿಕ ವ್ಯವಸ್ಥೆ ಬುಡಮೇಲಾಗಿದ್ದು, ಇದುವರೆಗೂ ಸರಳಸೂತ್ರಕ್ಕೆ ಬರಲು ಸಾಧ್ಯವಾಗಿಲ್ಲ. ಉನ್ನತ ಶಿಕ್ಷಣವಂತೂ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗಿದೆ ಗೊತ್ತಿಲ್ಲ, ಯಾವಾಗ ಮುಕ್ತಾಯಗೊಂಡು ಪರೀಕ್ಷೆ ಹೇಗೆ ಎಂದು ನಡೆಸಲಾಗುತ್ತದೆ ಎಂಬುದು ವಿಶ್ವವಿದ್ಯಾಲಯಗಳಿಗೇ ಅರಿವಿಲ್ಲ. ಕೆಲ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆ ಏನೂ ಮಾಡುತ್ತಿವೆ; ಏನು ಮಾಡಬೇಕಾಗಿದೆ ಎಂಬ ಪ್ರಜ್ಞೆ ಕಳೆದುಕೊಂಡಂತೆ ವರ್ತಿಸುತ್ತಿವೆ. ಪರೀಕ್ಷೆ ತಯಾರಿಯ ಬಿಡುವಿನ ಹೆಸರಿನಲ್ಲಿ ಅದೆಷ್ಟೋ ಕಾಲೇಜುಗಳಲ್ಲಿ ತರಗತಿಗಳೇ ಸ್ಥಗೀತಗೊಂಡಿವೆ. ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಾದಿ ಸರ್ಕಾರಿಯ ಬಹಳಷ್ಟು ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಮನಬಂದಂತೆ ಪರೀಕ್ಷೆಗಳನ್ನು ಮುಂದೂಡುತ್ತ, ನಿಗದಿತ ದಿನಾಂಕಗಳನ್ನು ಪ್ರಕಟಿಸದೆ ವಿದ್ಯಾರ್ಥಿಗಳನ್ನು ನಡುನೀರಿನಲ್ಲಿ ಬಿಟ್ಟಂತಾಗಿ ಅವರಿಗೆ ಏನು ಮಾಡಬೇಕು ತೋಚದಂತಾಗಿದೆ. ಇನ್ನು ಹೊಸ ಶಿಕ್ಷಣ ನೀತಿಯ ಗತಿಯ ಬಗ್ಗೆ ಮಾತನಾಡಿದಷ್ಟು ಕಡಿಮೆ; ಗೋಡೆಯೊಳಗಿನ ಮಣ್ಣು ಕೆರೆದಂತೆ.
ಉನ್ನತ ಶಿಕ್ಷಣದ ಹಣೆಯ ಮೇಲೆ ಎರಡು ಪ್ರಮುಖ ಗೆರೆಗಳ ಬರಹ ಈ ರೀತಿಯಾದರೆ, ಪಿಯುಸಿದಂತೂ ಇನ್ನೊಂದು ರೀತಿ. ಪಿಯುಸಿ ಶಿಕ್ಷಣ ಅದರಲ್ಲೂ ಸೈನ್ಸ್ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದೆ. ಹೀಗಾಗಿ, ಕೋಳಿ ಸಾಕುವವರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ. ಮೊಟ್ಟೆಯ ಪಾಲು ತನಗೊಂದಿಷ್ಟು ಸಿಕ್ಕರೆ ಸಾಕು ಎನುವಂತೆ ಸರ್ಕಾರವೂ ಸಹಿತ “ಕೋಳಿ ಇದ್ದರೆ ಸಾಕಿಕೊ” ಎನ್ನುವಂತೆ ಅನುಮತಿ ನೀಡುತ್ತಿದೆ.
NEET, CET, JEE ತರಬೇತಿ ಕೇಂದ್ರಗಳು ನಾಯಿಕೊಡೆಗಳಂತೆ ಹಾದಿಬೀದಿಗಳಲ್ಲಿ ತಲೆಎತ್ತಿ ನಿಂತಿವೆ. ಬಹುತೇಕ ಖಾಸಗಿ ಕಾಲೇಜುಗಳು ನಿಗದಿತ ಪಠ್ಯಕ್ರಮದ ಗುಣಮಟ್ಟದ ಬೋಧನೆಗಿಂತ NEET, CET,JEE ತರಬೇತಿ ಹೆಸರಿನಲ್ಲಿಯೇ ಪ್ರಚಾರದ ಹೆಸರಿನಲ್ಲಿ ಪ್ರವೇಶ ಪಡೆದು ಲಕ್ಷಾಂತರ ರೂಪಾಯಿಗಳ ಫೀ ವಸೂಲಿ ಮಾಡುತ್ತಿವೆ. ಇಂಥ ಶಿಕ್ಷಣ ಸಂಸ್ಥೆಗಳಿಗೆ ಪಠ್ಯಕ್ರಮದ ಸೃಜನಶೀಲ ಗುಣಮಟ್ಟದ ಬೋಧನೆಗಿಂತ ವೃತ್ತಿಪರ ಕೋರ್ಸಗಳ ತರಬೇತಿಯೇ ಮುಖ್ಯವಾಗಿ ಮಕ್ಕಳನ್ನು ಕೃತಕ ಬುದ್ಧಿವಂತರನ್ನಾಗಿ ಮಾಡುವುದರ ಜೊತೆಗೆ ಮಾನಸಿಕ ಖಿನ್ನತೆಗೆ ಒಳಪಡೆಸುತ್ತಿವೆ. ಸೃಜನಶೀಲತೆ ಕಳೆದುಕೊಂಡ ಈ ಮಕ್ಕಳು ಸಮಾಜದಲ್ಲಿ ಅದೇಗೆ ಬೆಳವಣಿಗೆ ಕಾಣಲು ಸಾಧ್ಯ ಹಾಗೂ ಇವರ ಕೊಡುಗೆ ಎಂಥದು ಎಂಬುದನ್ನು ನುರಿತ ಮತ್ತು ಓರಿಜನಲ್ ಶಿಕ್ಷಣ ತಜ್ಞರು ಮಾತ್ರ ಹೇಳಬೇಕು.
ಈ ರೀತಿಯ ಶೈಕ್ಷಣಿಕ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಹಬ್ಬ, ಹರಿದಿನಗಳ ಸಂಭ್ರಮದ ಜೊತೆಗೆ ಬೇಸಿಗೆ ರಜೆ, ದೀಪಾವಳಿ ರಜೆಗಳ ಸೃಜನಶೀಲ ಸಂಭ್ರಮದಿಂದ ವಂಚಿತಗೊಂಡು ಬೆಳೆಯುತ್ತಿವೆ. ಮನುಷ್ಯ ಸಂಬಂಧ ಇಂಥ ಸಹಜ ಸಾಮಾಜಿಕ ಪ್ರಕ್ರಿಯೆಗಳಿಂದ ದೂರನಿಂತು ಬೆಳೆಯುತ್ತಿರುವ ಇಂದಿನ ಮಕ್ಕಳ ಮಾನಸಿಕ ಸ್ಥಿತಿ ಯಾವ ರೀತಿ ಕುಸಿದಿದೆ ಎಮಬುದನ್ನು ಬಿಡಿಸಿ ಹೇಳಬೇಕಾಗಿಲ್ಲ; ಪ್ರತಿ ಮನೆಯಲ್ಲೂ ಜೀವಂತ ಸಾಕ್ಷಿಗಳು ದೊರೆಯುತ್ತವೆ. ಇದಕ್ಕೆ ನಮ್ಮ ಶೈಕ್ಷಣಿಕ ವ್ಯವಸ್ಥೆಯೇ ಮೂಲ ಕಾರಣ ಎಂಬುದು ಪ್ರಜ್ಞಾವಂತ ಮನಸ್ಸುಗಳ ತೋರಬೇರಗಳು ತೋರುತ್ತಿವೆ.
****