ಬೆಳಗಾವಿ ಜಿಲ್ಲೆಯಲ್ಲಿ ಸ್ಪರ್ಧೆಗೆ ನಿವೃತ್ತ ಐಪಿಎಸ್ ಸಿದ್ಧತೆ
ಬೆಳಗಾವಿ- ಎರಡು ದಿನಗಳ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಎಎಪಿ ಸೇರುವ ಮೂಲಕ ಸುದ್ದಿಯಾಗಿದ್ದರು. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕಮಾಲ್ ಮಾಡಲು ಆಮ್ ಆದ್ಮಿ ಪಕ್ಷ ಸಿದ್ದತೆ ಮಾಡಿಕೊಂಡಿದೆ. ಇನ್ನೂ ಅನೇಕರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳ ಸಹ ಚರ್ಚೆಯಲ್ಲಿ ಇವೆ.
ಬೆಳಗಾವಿ ಉತ್ತರ ವಲಯ ಐಜಿಪಿಯಾಗಿದ್ದ ಭಾಸ್ಕರ್ ರಾವ್ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಜತಗೆ ನಗರ ಪೊಲೀಸ್ ಆಯುಕ್ತರಾಗಿಯೂ ಕೆಲಸ ಮಾಡಿದ್ದಾರೆ. ಸ್ವಯಂ ನಿವೃತ್ತಿ ಪಡೆದು ಎಎಪಿ ಸೇರಿಕೊಂಡಿದ್ದಾರೆ ಭಾಸ್ಕರ್ ರಾವ್. ಬೆಳಗಾವಿ ಮರಾಠಿ ಪ್ರಾಬಲ್ಯದ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಮರಾಠಿಗರು ನಿರ್ಯಾಯಕರು. ಇತ್ತೀಚಿಗೆ ಬೆಳಗಾವಿ ಭೇಟಿ ನೀಡಿರುವ ಭಾಸ್ಕರ್ ರಾವ್ ಎಂಇಎಸ್ ನಾಯಕರ ಜತಗೆ ಮಹತ್ವದ ಸಭೆ ನಡೆಸಿದ್ದಾರೆ. ಎಂಇಎಸ್ ನಗರದ ಘಟಕದ ಅಧ್ಯಕ್ಷ ದೀಪಕ್ ದಳವಿ, ಮಾಜಿ ಶಾಸಕ ಮನೋಹರ್ ಕಿಣೇಕರ್ ಸೇರಿ ಅನೇಕರ ಜತೆಗೆ ಚರ್ಚೆ ನಡೆಸಿದ್ದಾರೆ.
ಈ ಬೆಳವಣಿಗೆ ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದೆ ಪಾರುಪತ್ಯ ಅನೇಕ ವರ್ಷಗಳಿಂದ ಇದೆ. ಇದಕ್ಕೆ ಕಡಿವಾಣ ಹಾಕಲು ಎಎಪಿ ಮೂಲಕ ಭಾಸ್ಕರ್ ರಾವ್ ಕಣಕ್ಕೆ ಇಳಿಯೋ ಸಾಧ್ಯತೆ ಇದೆ. ಎಎಪಿ ಸೇರಿ ಹೊಸ ನಾಡು ಕಟ್ಟುವ ಮಾತನಾಡಿದ್ದ ಭಾಸ್ಕರ್ ರಾವ್, ಇದಕ್ಕೂ ಮೊದಲು ಎಂಇಎಸ್ ನಾಯಕರ ಜತೆಗೆ ಸಭೆ ನಡೆಸಿರುವ ವಿಚಾರ ಹಲವಾರು ಬಿಜೆಪಿ ನಾಯಕರಿಗೆ ನಡುಕ ಹುಟ್ಟಿಸಿದೆ.