Breaking News

ನಾಳೆ ಬೆಳಗಾವಿಯಲ್ಲಿ ‘ಕೈಗಾರಿಕಾ ಅದಾಲತ್‌…..’

ಯುವಕ/ಯುವತಿಯರು ಸ್ವಂತ ಉದ್ಯೋಗ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು: ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ
ಬೆಳಗಾವಿ, ಏ.07 (ಕರ್ನಾಟಕ ವಾರ್ತೆ):  ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಸ್ವಂತ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಮಾಹಿತಿ ಒದಗಿಸಲು ಕೈಗಾರಿಕಾ ಇಲಾಖೆಯಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಏಪ್ರಿಲ್‌ 8 ರಂದು “ಕೈಗಾರಿಕಾ ಅದಾಲತ್ ಹಾಗೂ ಕಾರ್ಯಾಗಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಏ.7) ಉದ್ಯಮಿಯಾಗು- ಉದ್ಯೋಗ ನೀಡು ಕಾರ್ಯಗಾರ ಹಾಗೂ “ಕೈಗಾರಿಕಾ ಅದಾಲತ್” ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಉದ್ಯಮಿಯಾಗು- ಉದ್ಯೋಗ ನೀಡು ಕಾರ್ಯಗಾರ ಹಾಗೂ “ಕೈಗಾರಿಕಾ ಅದಾಲತ್” ಅನೇಕ ವಿದ್ಯಾರ್ಥಿಗಳಿಗೆ ಮತ್ತು ಸ್ವಂತ ಉದ್ದಿಮೆ ಪ್ರಾರಂಭಿಸಲು ಹೊರಟಿರುವ ಯುವಕ ಯುವತಿರಿಗೆ ನೆರವಾಗಲಿದೆ. ಯುವಕರು ಯಶಸ್ಸು ಪಡೆಯಲು ಹೊಸ ಆಲೋಚನೆಗಳು ಈ ಕಾರ್ಯಗಾರ ಮೂಲಕ ಸಿಗಲಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.
ಬೆಂಗಳೂರಿನಲ್ಲಿ 2021 ರ ಅಕ್ಟೋಬರ್‌ 11 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಈಗ ಬೆಳಗಾವಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಉದ್ಯೋಗಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಅವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬೆಳಿಗ್ಗೆ 9.30 ಗಂಟೆಗೆ
ಉದ್ಯಮಿಯಾಗು – ಉದ್ಯೋಗ ನೀಡು ಕಾರ್ಯಗಾರ  ಹಾಗೂ ಮಧ್ಯಾಹ್ನ 3.30 ಗಂಟೆಗೆ “ಕೈಗಾರಿಕಾ ಆದಾಲತ್” ಕಾರ್ಯಕ್ರಮ  ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಉದ್ಯಮಿಯಾಗು – ಉದ್ಯೋಗ ನೀಡು ಕಾರ್ಯಗಾರ:
ಕಾರ್ಯಕ್ರಮದಲ್ಲಿ ಉದ್ಯಮಿಗಳಾಗುವುದು ಹೇಗೆ? ಎಲ್ಲಿ ಮತ್ತು ಹೇಗೆ ಸಾಲಸೌಲಭ್ಯ ದೊರೆಯುತ್ತದೆ? ಯಾವ  ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬುದನ್ನು ಕಾರ್ಯಗಾರದಲ್ಲಿ ತಜ್ಞರು ವಿವರಿಸಲಿದ್ದಾರೆ ಎಂದು ತಿಳಿಸಿದರು.
ಧಾರವಾಡ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಹಾವೇರಿ ಹಾಗೂ ಗದಗ ಜಿಲ್ಲೆಯ ವಿದ್ಯಾರ್ಥಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಅದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಹೊಸ ಉದ್ಯಮ ಆರಂಭಿಸುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿ  5 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ 3 ತಿಂಗಳು ತರಬೇತಿ ನೀಡಲಾಗುವುದು ತಿಳಿಸಿದರು.
ಉದ್ಯೋಗ ಪಡೆದರಷ್ಟೇ ಸಾಲದು, ಉದ್ಯಮಿಯಾಗುವುದರ ಜೊತೆಗೆ ಇನ್ನೊಬ್ಬರಿಗೆ ಉದ್ಯೋಗ ನೀಡಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಮುಂಬರುವ ದಿನಗಳಲ್ಲಿ, ಮೈಸೂರು, ಕರಾವಳಿ ಹಾಗೂ ಬೆಂಗಳೂರಿನಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ದೊಡ್ಡಬಸವರಾಜು ಅವರು ಹೇಳಿದರು.
ಕೈಗಾರಿಕಾ ಅದಾಲತ್‌:
ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಕಲಬುರಗಿ ವಿಭಾಗದಲ್ಲಿ  2022ರ ಏಪ್ರಿಲ್‌ 8ರಂದು ಮಧ್ಯಾಹ್ನ 3.30ಕ್ಕೆ ‘ಕೈಗಾರಿಕಾ ಅದಾಲತ್‌’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಮೂಲಕ ಸರ್ಕಾರವೇ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಉದ್ಯಮದಾರರ ಸಮಸ್ಯೆ ಆಲಿಸಿ, ಸಮಸ್ಯೆ ಇತ್ಯರ್ಥ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಯಶಸ್ಸಿನ ನಂತರ ಬೆಳಗಾವಿ, ಧಾರವಾಡ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿರುವ ಸೂಕ್ಷ್ಮ, ಸಣ್ಣ ಮಧ್ಯಮ ಮತ್ತು ಬೃಹತ್‌ ಕೈಗಾರಿಕೆ ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಸೂಚಿಸಲಾಗುತ್ತದೆ.
ವಿದ್ಯುತ್‌ ಸರಬರಾಜು ಕಂಪನಿ, ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ ಯೋಜನಾ ಇಲಾಖೆ, ಕಾರ್ಮಿಕ ಇಲಾಖೆ,  ಕಾರ್ಖಾನೆ ಮತ್ತು ಬಾಯ್ಲರ್‌ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ.
ಅದೇ ರೀತಿ ಕೈಗಾರಿಕಾ ಘಟಕ ಸ್ಥಾಪನೆಯ  ವಿವಿಧ ಹಂತದ ಅನುಮತಿ ಪಡೆಯಲು ಈ ವೇದಿಕೆ ನೆರವಾಗಲಿದೆ ಎಂದು ಕರ್ನಾಟಕ ಉದ್ಯೋಗಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *