ಬೆಳಗಾವಿ,ಏಪ್ರಿಲ್ 12: ಪೊಲೀಸ್ ಇಲಾಖೆ ರಾಜ್ಯದಲ್ಲಿ ಉತ್ತಮ ಸೇವೆ ಒದಗಿಸುತ್ತಿದೆ. ಪೊಲೀಸ್ ಸಿಬ್ಬಂದಿ ನೆಮ್ಮದಿಯಿಂದ ತಮ್ಮ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈಗಿರುವ ವಸತಿ ಗೃಹಗಳಿಗಿಂತ ದೊಡ್ಡ ಮಟ್ಟದಲ್ಲಿ 20 ಸಾವಿರ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 10 ಸಾವಿರ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ನಗರದ ಮಚ್ಚೆ ಕೆ.ಎಸ್.ಆರ್.ಪಿ 2ನೇ ಪಡೆಯ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ(ಏ.12) ಕೆಎಸ್ಆರ್ ಪಿ ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥಸಂಚಲನ ಪರಿವೀಕ್ಷಿಸಿ ಅವರು ಮಾತನಾಡಿದರು.
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ, ಭಾರತೀಯರಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯ ಇಲ್ಲ ಎಂದು ಹೇಳಿದ್ದರು. ಪ್ರಸ್ತುತ ನಮ್ಮ ದೇಶದಲ್ಲಿ ಪೊಲೀಸ್ ಪಡೆ ಶಿಸ್ತು, ಪ್ರಾಮಾಣಿಕತೆಯಿಂದ ಶಾಂತಿ ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಉತ್ತಮ ರೀತಿಯ ಸೇವೆ ಸಲ್ಲಿಸುತ್ತಿದೆ. ಚುನಾವಣೆ ಸಮಯದಲ್ಲಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯ ಶೌರ್ಯ, ಸಾಹಸ, ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುತ್ತಿರುವುದು ನಮ್ಮ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕೆಲವು ಸಮಾಜಘಾತಕರಿಂದ ವಿದೇಶ ಏಜೆಂಟ್ ರ ಜೊತೆಗೆ ಕೈ ಜೋಡಿಸಿ ಆಂತರಿಕ ಶಾಂತಿಯನ್ನು ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಂತವರನ್ನು ಎದುರಿಸಿ ದೇಶದ ಆಂತರಿಕ ಭದ್ರತೆಗೆ ಪೊಲೀಸ್ ಇಲಾಖೆ ಗಟ್ಟಿಯಾಗಿ ನಿಂತಿದೆ ಎಂದು ತಿಳಿಸಿದರು.
9 ತಿಂಗಳಗಳ ಕಾಲ ವಿಶೇಷ ತರಬೇತಿಯನ್ನು ಪಡೆದ 216 ಕೆ.ಎಸ್.ಆರ್.ಪಿ ಸಿಬ್ಬಂದಿಗಳು ರಾಷ್ಟ್ರ ಧ್ವಜ ಅಡಿಯಲ್ಲಿ ಸಂಕಲ್ಪ ಮಾಡಿ, ಸಮಾಜದಲ್ಲಿ, ಶಾಂತಿ ಸುವ್ಯವಸ್ಥೆ, ಸಂವಿಧಾನದ ಮೌಲ್ಯಗಳನ್ನು ಕಾಪಾಡಬೇಕು ಹಾಗೂ ಕಾನೂನು ಪಾಲಿಸುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಎಂದು ಅವರು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಳೆದ 1 ವರ್ಷ 6 ತಿಂಗಳಲ್ಲಿ ಪೊಲೀಸ್ ಠಾಣೆಗಳ ಉನ್ನತಿಗೆ ಕ್ರಮ ಕೈಗೊಳ್ಳಲಾಗಿದೆ. 200 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು 100 ಪೊಲೀಸ್ ಠಾಣೆಗಳನ್ನು ಉನ್ನತ ದರ್ಜೆಯಲ್ಲಿ ನಿರ್ಮಾಣ ಮಾಡಲಾಗಿದೆ ತಿಳಿಸಿದರು.
ಪೊಲೀಸ್ ತರಬೇತಿ ಪಡೆಯುವುದರಿಂದ ಶಿಸ್ತು, ಗೌರವ ತಾಳ್ಮೆಯ ಸಂಪಾದಿಸಬಹುದು ಜೊತೆಗೆ ಪೊಲೀಸರಿಗೆ ಪ್ರಾಮಾಣಿತೆ ಬಹು ಮುಖ್ಯವಾಗಿದೆ. ಪ್ರಾಮಾಣಿಕತೆಯಿಂದ ದೇಶ ಸೇವೆ, ಜನಸೇವೆ ಮಾಡಲು ಮಾನಸಿಕವಾಗಿ ಪೊಲೀಸರು ಸಜ್ಜಾಗಬೇಕು ಎಂದು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಹೇಳಿದರು.
ಶೀಘ್ರದಲ್ಲಿ 950 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ಭರ್ತಿ :
ರಾಜ್ಯದಲ್ಲಿ ಒಟ್ಟಾರೆ 950 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಕಾಲಿ ಇದ್ದು, ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಮಾಡಲಾಗುವುದು. 950 ಸಬ್ ಇನ್ಸ್ಪೆಕ್ಟರ್ ನೇಮಕಾತಿಯಾದರೆ ರಾಜ್ಯದಲ್ಲಿ ಎಲ್ಲ ಸಬ್ ಇನ್ಸ್ಪೆಕ್ಟರ್ ಭರ್ತಿ ಪೂರ್ಣಗೊಳ್ಳುತ್ತದೆ.
ಪ್ರತಿ ವರ್ಷ ರಾಜ್ಯದಲ್ಲಿ 4000 ಪೊಲೀಸ್ ನೇಮಕಾತಿ ಮಾಡಲಾಗುತ್ತಿದೆ. 1 ಲಕ್ಷ ಸಿಬ್ಬಂದಿಗಳಲ್ಲಿ 35000 ಹುದ್ದೆಗಳು ಖಾಲಿ ಇದ್ದು, 12000 ಮಾತ್ರ ಸಿಬ್ಬಂದಿ ನೇಮಕಾತಿ ಉಳಿದಿದೆ, ಪ್ರಸ್ತುತ ಆಯ್ಕೆಯಾದ ಸಿಬ್ಬಂದಿಗಳನ್ನು ಸೇರಿಸಿದರೆ ಅದು ಕೂಡಾ ಕಡಿಮೆ ಆಗತ್ತೆ ಎಂದರು.
ಕ್ರಿಡಾಪಟುಗಳಿಗೆ ಉತ್ತೇಜನ ನೀಡಲು, ರಾಜ್ಯ ಕ್ರಿಡೆಯಲ್ಲಿ ಉತ್ತಮ ಸಾಧನೆ ಮಾಡಲು ಪೊಲೀಸ್ ಇಲಾಖೆಯಲ್ಲಿ ಶೇ 2 ರಷ್ಟು ಕ್ರಿಡಾ ವಿಭಾದಗ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ ಎಂದರು.
ವಿಶೇಷ ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಾರ್ಥಿಗಳು ತರಬೇತಿ ವಿವಿಧ ಒಳಾಂಗಣ ಮತ್ತು ಹೊರಾಂಗಣ ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಅತೀ ಹೆಚ್ಚು ಅಂಕಪಡೆದ ಪ್ರಶಿಕ್ಷಾರ್ಥಿಗಳಿಗೆ ಗೃಹ ಸಚಿವರು ಬಹುಮಾನ ವಿತರಣೆ ಮಾಡಿದರು.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನ ಅಪರ ಪೊಲೀಸ್ ಮಹಾ ನಿರ್ದೇಶಕರಾದ ಆಲೋಕ್ ಕುಮಾರ್ ಎಲ್ಲರನ್ನು ಸ್ವಾಗತಿಸಿ, ಹೊಸದಾಗಿ ಕೆಲಸಕ್ಕೆ ಸೇರಿದ ಸಿಬ್ಬಂದಿಗೆ ಪ್ರಬುದ್ದ ತರಬೇತಿ ನೀಡಿದ್ದೇವೆ ಪ್ರವಾಹ ಬೀತಿ ಸಮಯದಲ್ಲಿ ವಿಪತ್ತು ನಿರ್ವಹಣೆ ಸಮಿತಿ ಜೊತೆಗೆ ಸೇರಿ ವಿಪತ್ತು ನಿರ್ವಹಣೆಯ ಜೊತೆ ಪ್ರಶಿಕ್ಷಾರ್ಥಿಗಳಿಗೆ ಉತ್ತಮ ರೀತಿಯ ತರಬೇತಿ ನೀಡಿದ್ದೇವೆ ಎಂದು ತಿಳಿಸಿದರು.
ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ಭಾಷೆಯಲ್ಲಿ ಕವಾಯತ್ತು ಮಾಡಿದ್ದು ಸಂತೋಷ ಸಂಗತಿ. ಅದರಲ್ಲು ಮಹಿಳಾ ಸಿಬ್ಬಂದಿಗಳು ರಾಷ್ಟ್ರದ್ವಜ, ಪೊಲೀಸ್ ದ್ವಜ ಆಗಮನವನ್ನು ತಂದಿದ್ದು ಬಹಳ ಹೆಮ್ಮೆ ಎನಿಸುತ್ತದೆ ಎಂದರು.
ಹೆಚ್ಚುವರಿ ತರಬೇತಿ ಶಾಲೆ ಕೆ.ಎಸ್.ಆರ್.ಪಿ 2ನೇ ಪಡೆಯ ಪ್ರಾಂಶುಪಾಲರಾದ ಹಂಜಾ ಹುಸೇನ್ ಅವರು ಪ್ರಶಿಕ್ಷಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ವರದಿ ವಾಚನ ನೀಡಿದರು.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಪೊಲೀಸ್ ಮಹಾ ನಿರೀಕ್ಷಕರಾದ ರವಿ ಎಸ್., ಬೆಳಗಾವಿ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ರಾಜ್ಯದ ಎಲ್ಲ ಕೆ.ಎಸ್.ಆರ್.ಪಿ ಪಡೆಗಳ ಅಧಿಕಾರಿಗಳು ಹಾಗೂ ಕೆ.ಎಸ್.ಆರ್.ಪಿ ಸಿಬ್ಬಂದಿ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
******