ಬೆಳಗಾವಿ ಜಿಲ್ಲೆಗೆ 6 ಕ್ರೀಡಾ ಅಕಾಡೆಮಿಗಳು ಮಂಜೂರು
ಬೆಳಗಾವಿ ಜಿಲ್ಲೆ ಈಗ ರಾಚ್ಟ್ರದ ಗಮನ ಸೆಳೆದಿದೆ,ಐತಿಹಾಸಿಕ ಈ ಜಿಲ್ಲೆಗೆ ಆರು ಸ್ಪೋರ್ಟ್ಸ್ ಅಕ್ಯಾಡಮಿಗಳು ಮಂಜೂರಾಗಿದ್ದು, ಇನ್ಮುಂದೆ ಇಲ್ಲೂ ಜಾಗತಿಕ ಮಟ್ಟದ ಕ್ರೀಡಾ ತರಬೇತಿ ಸಿಗಿದೆ
ಬೆಳಗಾವಿ:
ಐತಿಹಾಸಿಕ ಜಿಲ್ಲೆ ಬೆಳಗಾವಿಗೆ ಕೇಂದ್ರ ಸರ್ಕಾರ ಆರು ಕ್ರೀಡಾ ಅಕಾಡೆಮಿಗಳನ್ನು ಮಂಜೂರು ಮಾಡಿದ್ದು, ಈ ಭಾಗದ ಕ್ರೀಡಾಸಕ್ತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ .
ಕೇಂದ್ರ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೆಳಗಾವಿ ಜಿಲ್ಲೆಗೆ ಆರು ಕ್ರೀಡಾ ಅಕಾಡೆಮಿಗಳು ಮಂಜೂರು ಮಾಡಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚಂದರಗಿ ಕ್ರೀಡಾ ಶಾಲೆಗೆ ನಾಲ್ಕು ಹಾಗೂ ಬೆಳಗಾವಿ ಕೆಎಲ್ಇ ಸಂಸ್ಥೆಗೆ ಎರಡು ಅಕಾಡೆಮಿಗಳನ್ನು ನೀಡಲಾಗಿದೆ. ಇನ್ಮುಂದೆ ಇಲ್ಲೆಯೇ ಜಾಗತಿಕ ಮಟ್ಟದ ಕ್ರೀಡಾ ತರಬೇತಿ ಲಭ್ಯವಾಗಲಿದ್ದು, ಈಗಾಗಲೇ ತರಬೇತಿಯೂ ಆರಂಭವಾಗಿದೆ.
ಇಲ್ಲಿ ಸಿಗಲಿದೆ ತರಬೇತಿ
ಕೇಂದ್ರ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಖೇಲೋ ಇಂಡಿಯಾ ಯೋಜನೆಯಡಿ ಪ್ರಾರಂಭಿಕ ಹಂತದಲ್ಲಿ ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಕ್ರೀಡಾ ಅಕಾಡೆಮಿ ಮಂಜೂರು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚಂದರಗಿ ಗ್ರಾಮದ ಎಸ್.ಎಂ. ಕಲೂತಿ ಕ್ರೀಡಾ ಶಾಲೆಗೆ ನಾಲ್ಕು ಅಕಾಡೆಮಿಗಳು ಮಂಜೂರಾಗಿವೆ. ಅಥ್ಲೆಟಿಕ್ಸ್, ರೆಸಲಿಂಗ್, ಸೈಕ್ಲಿಂಗ್, ಖೋಖೋ ಕ್ರೀಡಾ ವಿಭಾಗದ ಅಕಾಡೆಮಿಗಳನ್ನು ನೀಡಲಾಗಿದೆ. ಇನ್ನು ಕೆಎಲ್ಇ ಸಂಸ್ಥೆಗೆ ಜೂಡೋ ಹಾಗೂ ಅಥ್ಲೆಟಿಕ್ ಕ್ರೀಡಾ ಅಕಾಡೆಮಿ ಮಂಜೂರಾಗಿವೆ. ಈಗಾಗಲೇ ರಾಷ್ಟ್ರ ಮಟ್ಟದ ತರಬೇತುದಾರರು ಇಲ್ಲಿಗೆ ಕರೆ ತರಲಾಗಿದ್ದು, ಜಾಗತಿಕ ಮಟ್ಟದ ಕ್ರೀಡಾ ತರಬೇತಿ ನೀಡಲಾಗುತ್ತಿದೆ.
ಹಳ್ಳಿಯಿಂದ ಒಲಿಂಪಿಕ್‌ವರೆಗೆ!
ಎಂಟು ರಾಜ್ಯಗಳಿಗೆ ನೀಡಲಾದ ಕ್ರೀಡಾ ಅಕಾಡೆಮಿಗಳಲ್ಲಿ ಉತ್ಕೃಷ್ಟ ಕ್ರೀಡಾ ತರಬೇತಿ ಲಭ್ಯವಾಗಲಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ಮೂಲಕ ಈ ಅಕಾಡೆಮಿಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಖೇಲೋ ಇಂಡಿಯಾ ಯೋಜನೆಯಡಿ ಈ ಅಕಾಡೆಮಿಗಳಿಗೆ ಕೇಂದ್ರ ಕ್ರೀಡಾ ಇಲಾಖೆ ವಿಶೇಷ ಅನುದಾನ ಬಿಡುಗಡೆ ಮಾಡಲಿದೆ. ಪ್ರತಿ ಕ್ರೀಡಾಪಟುವಿನ ವೆಚ್ಚವನ್ನು ಅಕಾಡೆಮಿ ಮೂಲಕ ಸರ್ಕಾರವೇ ಭರಿಸಲಿದೆ. ಸಾಯಿ ಮೂಲಕ ಅಕಾಡೆಮಿಗೆ ಬರುವ ಕ್ರೀಡಾಪಟುಗಳು ಒಲಿಂಪಿಕ್, ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯುವ ಜೊತೆಗೆ ಪದಕ ಗೆಲ್ಲುವವರೆಗೆ ಬೇಕಾದ ತರಬೇತಿ ಇಲ್ಲಿ ನೀಡಲಾಗುತ್ತದೆ.
ಕೆಳಮಟ್ಟದಿಂದ ತರಬೇತಿ:
ಕ್ರೀಡಾಪಟು ಯಾವ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾನೆ ಎಂಬುದನ್ನು ಸಾಯಿ ನಿರ್ಧರಿಸುತ್ತದೆ. ಆ ಕ್ರೀಡಾಪಟು ಒಳ್ಳೆಯ ಕೌಶಲಗಳನ್ನು ಹೊಂದಿದ್ದರೆ ಅದನ್ನು ಗುರುತಿಸಿ ಅಕಾಡೆಮಿಗಳಿಗೆ ಕಳಿಸುವ ಜವಾದ್ಬಾರಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನೀಡಲಾಗಿದೆ. ಸಾಯಿಯಿಂದ ನೇರವಾಗಿ ಕ್ರೀಡಾಪಟುಗಳು ಅಕಾಡೆಮಿಗೆ ಕಳಿಸಲಾಗುತ್ತದೆ. ಇಲ್ಲಿ ಆಯಾ ಕ್ರೀಡೆಗೆ ಸಂಬಂಧಿಸಿದ ಕೆಳಮಟ್ಟದಿಂದ ತರಬೇತಿ ನೀಡಲಾಗುತ್ತದೆ. ಹೀಗೆ ಉತ್ಕೃಷ್ಟ ತರಬೇತಿ ಪಡೆಯುವ ಕ್ರೀಡಾಪಟುಗಳು ಒಂದಿಲ್ಲ ಒಂದು ಕ್ರೀಡಾ ವಿಭಾಗಗಳಲ್ಲಿ ದೇಶಕ್ಕೆ ಪದಕ ತಂದುಕೊಡಲಿದ್ದಾರೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರೀಡೆಗೆ ಆಧ್ಯತೆ ನೀಡುತ್ತಿದ್ದು, ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನು ಅಕಾಡೆಮಿಗಳು ಮಾಡಬೇಕಿದೆ.
–