ದೆಹಲಿಯಲ್ಲಿ ದಿನಾಂಕ 10/05/2022 ರಿಂದ ಪ್ರಾರಂಭವಾಗಿರುವ ಐಪಿಎಲ್ ಮಾದರಿಯ ರಾಷ್ಟ್ರಮಟ್ಟದ ಮೂರನೇ ಆವೃತ್ತಿಯ *”ಡೆಫ್ ಪ್ರೀಮಿಯರ್ ಲೀಗ್-2022″* ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಚೆನ್ನೈ ಬ್ಲಾಸ್ಟರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬೆಳಗಾವಿ ಜಿಲ್ಲೆಯ ಮದವಾಲ್ ಗ್ರಾಮದ ಯುವ ಪ್ರತಿಭೆ *ನಾಗರಾಜ ಅನಿಲ್ ನಿರವಾಣಿ* ಅವರು ನಮ್ಮ ಜಿಲ್ಲೆಯ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದು ನಾವೆಲ್ಲ ಹೆಮ್ಮೆ ಪಡುವ ವಿಷಯವಾಗಿದೆ.
ಬಾಲ್ಯದಿಂದಲೂ ಕಿವುಡತನವಿದ್ದರೂ ಆ ನ್ಯೂನತೆಯನ್ನು ತನ್ನ ಅಗಾಧವಾದ ಶಕ್ತಿಯನ್ನಾಗಿ ಪರಿವರ್ತಿಸಿ ಸಾಧನೆಗಳ ಶಿಖರವೇರಿರುವ ಇವರು ನಡೆದುಬಂದ ಹಾದಿ ಸುಲಭವಾದದ್ದಲ್ಲ.
ಈತ ಒಬ್ಬ ಉತ್ತಮ ಚಿತ್ರಕಲಾವಿದನಾಗಿದ್ದು ರಾಷ್ಟ್ರಮಟ್ಟದ ಚಿತ್ರಕಲಾ ಕಾನ್ಫರೆನ್ಸ್ ಗಳಲ್ಲಿಯೂ ಭಾಗಿಯಾಗಿದ್ದಾರೆ, ಹಾಗೆಯೇ ಈತ ಒಬ್ಬ ಉತ್ತಮ ಈಜುಗಾರನಾಗಿದ್ದು ರಾಷ್ಟ್ರಮಟ್ಟದಲ್ಲಿನ ಈತನ ಉತ್ತಮ ಸಾಧನೆಗೆ ಪೋಲೆಂಡ್ ಹಾಗೂ ಬ್ರೆಜಿಲ್ ಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಆಯ್ಕೆಯಾದರೂ ಕೋವಿಡ್ ಅಲೆಗಳ ಕಾರಣದಿಂದಾಗಿ ಭಾಗವಹಿಸಲಾಗಲಿಲ್ಲ.
ಈಗ ಕರ್ನಾಟಕದಿಂದ ಡಿಪಿಎಲ್-2022ರ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿರುವ 3 ಕ್ರಿಕೆಟ್ ಪಟುಗಳ ಪೈಕಿ ಈತನೂ ಒಬ್ಬನಾಗಿದ್ದು ನಮ್ಮ ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ಕ್ರಿಕೆಟಿಗ.ತಿಂಗಳ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಜಾಸ್ತಿ ಮೊತ್ತಕ್ಕೆ ಬಿಡ್ ಮಾಡಿ ಚೆನ್ನೈ ಬ್ಲಾಸ್ಟರ್ ತಂಡ ಈತನ ಸೇವೆಯನ್ನು ಪಡೆದಿರುವುದು ಸಂತಸದ ವಿಷಯ.
ಈ ಹಿಂದೆ ಆಡಿರುವ ಎಲ್ಲಾ ಪಂದ್ಯಾವಳಿಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಉತ್ತಮ ಆಲ್ ರೌಂಡರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ಈತನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.ಈ ಪಂದ್ಯಾವಳಿಯಲ್ಲಿ ಚೆನ್ನೈ ತಂಡದ ಜವಾಬ್ದಾರಿ ಈತನ ಹೆಗಲಮೇಲಿರುವುದು ಸಹಜವಾಗಿಯೇ ನಾಗರಾಜನ ಮೇಲೆ ಎಲ್ಲರಿಗೂ ಅಪಾರ ನಿರೀಕ್ಷೆ ಇದೆ.
ಎಲ್ಲರ ನಿರೀಕ್ಷೆಯನ್ನು ಸಾಕಾರಗೊಳಿಸಿ ಉತ್ತಮ ಪ್ರದರ್ಶನವನ್ನು ನೀಡಲಿ ಎಂದು ಬೆಳಗಾವಿ ಸುದ್ದಿ ಡಾಟ್ ಕಾಮ್ ಹಾರೈಸುತ್ತದೆ…