Breaking News

ಮತದಾರರಿಗೆ ಜಿಪಿಎಸ್ ಆಧಾರಿತ ಮತಗಟ್ಟೆ ಮಾಹಿತಿ: ಬಿಸ್ವಾಸ್

 

ಬೆಳಗಾವಿ, – ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದ್ದು, ಮತದಾರರಿಗೆ ಆಮಿಷವೊಡ್ಡುವ ಅಥವಾ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತ್ತು ಪಶ್ಚಿಮ ಶಿಕ್ಷಕರ ಮತಕ್ಷೇತಗಳ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಎಚ್ಚರಿಕೆ ನೀಡಿದರು.

ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತ್ತು ಪಶ್ಚಿಮ ಶಿಕ್ಷಕರ ಮತಕ್ಷೇತಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಮೇ 13) ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅನುಮತಿ ಇಲ್ಲದೇ ಚುನಾವಣಾ ಪ್ರಚಾರಕ್ಕಾಗಿ ಯಾವುದೇ ಸಾರ್ವಜನಿಕ ಸಭೆ ನಡೆಸುವಂತಿಲ್ಲ; ಒಂದು ವೇಳೆ ಅನುಮತಿ ಪಡೆಯದೇ ಸಭೆ ನಡೆಸಿದರೆ ಅಂತಹ ಅಭ್ಯರ್ಥಿಗಳಿಗೆ ಮುಂದಿನ ಪ್ರಚಾರಸಭೆಗೆ ಅನುಮತಿ ನಿರಾಕರಿಸಲಾಗುವುದು ಎಂದು ತಿಳಿಸಿದರು.

ಚುನಾವಣೆ ಘೋಷಣೆಯಾಗಿದ್ದು ಮೇ 19 ರಂದು ಅಧಿಸೂಚನೆ ಪ್ರಕಟಿಸಲಾಗುವುದು.
ಜೂನ್ 13 ರಂದು ಬೆಳಿಗ್ಗೆ 8ರಿಂದ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಜೂನ್ 15 ರಂದು ಮತ ಎಣಿಕೆ ನಡೆಯಲಿದೆ.
ಮತದಾರರ ಪಟ್ಟಿ ಹಾಗೂ ಮಾದರಿ ನೀತಿಸಂಹಿತೆ ಕುರಿತು ಏನೇ ಮಾಹಿತಿ ಅಗತ್ಯವಿದ್ದರೆ ಒದಗಿಸಲಾಗುವುದು.

ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಂದೇ ಮತಗಟ್ಟೆಯಲ್ಲಿ ಎರಡು ಪ್ರತ್ಯೇಕ ಮತಪೆಟ್ಟಿಗೆಗಳನ್ನು ಇಡಲಾಗುತ್ತದೆ.

ಪ್ರತಿ ಚುನಾವಣೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದರಿಂದ ಮತದಾರರು ನೀಡಿದ ವಿಳಾಸವನ್ನೇ ನಮೂದಿಸಲಾಗುತ್ತದೆ. ಇದರಿಂದ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ ಎಂದು ಬಿಸ್ವಾಸ್ ಅವರು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಸಾಕಷ್ಟು ಕಾಲಾವಕಾಶ ನೀಡಲಾಗಿರುತ್ತದೆ. ಆದಾಗ್ಯೂ ನಾಮಪತ್ರ ಸಲ್ಲಿಕೆಗೆ ಕಡೆಯ ದಿನದ ಹತ್ತು ದಿನಗಳ ಮುಂಚೆಯವರೆಗೆ ನಾಮಪತ್ರದಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ತಿಳಿಸಿದರು.

ಮತಗಟ್ಟೆ ಖಚಿತ ಮಾಹಿತಿ ಮತದಾರರಿಗೆ ಒದಗಿಸಲಾಗುವುದು:

ಪ್ರತಿಯೊಬ್ಬ ಮತದಾರರಿಗೆ ಅವರ ಮತಗಟ್ಟೆಯ ಮಾಹಿತಿಯನ್ನು ಜಿಪಿಎಸ್ ಮೂಲಕ ನೇರವಾಗಿ ಅವರಿಗೆ ಖಚಿತ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ವಿವರಿಸಿದರು.

ವಾಯವ್ಯ ಪದವೀಧರ/ಶಿಕ್ಷಕರ ಮತಕ್ಷೇತ್ರಗಳ ನಾಮಪತ್ರವನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸಲಾಗುವುದ. ಅದೇ ರೀತಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ನಾಮಪತ್ರವನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ.

ನಾಮಪತ್ರ ಸಲ್ಲಿಕೆ ಅಭ್ಯರ್ಥಿ ಸೇರಿದಂತೆ ಐದು ಜನರಿಗೆ‌ ಹಾಗೂ ಎರಡು ವಾಹನಗಳಿಗೆ ಮಾತ್ರ ಅವಕಾಶವಿದೆ.
ಮಾದರಿ ನೀತಿ ಸಂಹಿತೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಬಿಸ್ವಾಸ್ ಮನವಿ ಮಾಡಿಕೊಂಡರು.

ಚುನಾವಣಾ ಸಂದರ್ಭದಲ್ಲಿ ಕೈಗೊಳ್ಳಲಾಗುವ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದರು.

ಎಲ್ಲರೂ ಸುಶಿಕ್ಷಿತ ಮತದಾರರು ಇರುವುದರಿಂದ ಪ್ರಚಾರವನ್ನು ನಿಯಮಾವಳಿ ಪ್ರಕಾರವೇ ನಡೆಸಬೇಕು. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು‌ ಹಾಗೂ ವಾಹನಗಳು ಇರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ:

ಕೋವಿಡ್ ಮಾರ್ಗಸೂಚಿ ಪ್ರಕಾರ ಯಾವುದೇ ರೀತಿ

ಯ ರ್ಯಾಲಿ, ಯಾತ್ರೆಗಳಿಗೆ ಜನರು ಗುಂಪು ಸೇರುವುದಕ್ಕೆ ನಿರ್ಬಂಧವಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಐದಕ್ಕಿಂತ ಹೆಚ್ಚು ವಾಹನಗಳನ್ನು ಬಳಸುವಂತಿಲ್ಲ; ಈ ಬಾರಿ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಕನಿಷ್ಠ ಸಂಖ್ಯೆಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು.
ಮತ ಎಣಿಕೆ ದಿನ ಯಾವುದೇ ಮೆರವಣಿಗೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಗಣೇಶ್ ಚೌಗಲಾ, ಅಭಯ್ ಅವಲಕ್ಕಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *