ಬೆಳಗಾವಿ:
ಖಾಸಗಿ ತರಕಾರಿ ಮಾರುಕಟ್ಟೆ ದಲ್ಲಾಳಿಗಳ ಮೋಸದ ವಿರುದ್ಧ ರೈತಾಪಿ ವರ್ಗ ಸಿಡಿದೆದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಡತನ ಬಾಗೇವಾಡಿ ಬಳಿ ನಡೆದಿದೆ. ತರಕಾರಿ ಸಾಗಿಸುತ್ತಿದ್ದ ವಾಹನಕ್ಕೆ ತಡೆದ ರೈತರು ತೂಕದ ಯಂತ್ರ ಕಲ್ಲಿನಿಂದ ಜಜ್ಜಿದ ಆಕ್ರೋಶ ವ್ಯಕ್ತಪಡಿಸಿದರು.
ಕೊಡಚವಾಡ, ಚಿಕ್ಕದಿಣ್ಣಕೊಪ್ಪ, ಹೀರೇಮುನವಳ್ಳಿ, ಪಾರಿಶ್ವಾಡ, ದೇವಲತ್ತಿ, ಗಂದಿಗವಾಡ ಸೇರಿ ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ಇದೆ. ಸ್ಥಳೀಯ ವಾಹನ ಚಾಲಕರ ಸಂಪರ್ಕಿಸಿ ಖಾಸಗಿ ಮಾರುಕಟ್ಟೆ ದಲ್ಲಾಳಿಗಳು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ.
ಹಸಿಮೆಣಸಿನಕಾಯಿ, ಹಾಗಲಕಾಯಿ ಸೇರಿ ಇತರೆ ತರಕಾರಿ ತೂಕ ಮಾಡುವ ವೇಳೆ 50 ಕೆಜಿ ತೂಕ ಇದ್ದರೆ 7 ಕೆಜಿ ಕಡಿಮೆ ತೋರಿಸಿ ಮೋಸ ಮಾಡಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಮೆಣಸಿನಕಾಯಿ ಸಾಗಿಸುತ್ತಿದ್ದ ವಾಹನ ತಡೆದು ತರಾಟೆ ತೆಗೆದುಕೊಳ್ಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ನಂದಗಡ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.