Breaking News

ಹೀಗೊಂದು ಸಂತೆ…ಇಲ್ಲಿ ಹೋದ್ರೆ ಮಾಯವಾಗುತ್ತೆ ಚಿಂತೆ…!!

ಬೆಳಗಾವಿ, -ಅನಗತ್ಯ ಯಾವ ಯಾವುದೋ ಗಿಡಗಳನ್ನು ಪೋಷಿಸುವುದಕ್ಕಿಂತ ಪಕ್ಷಿ ಸಂಕುಲ, ಮನುಷ್ಯ ಕುಲ, ಪರಿಸರ ಪೂರಕವಾಗಿರುವ ಸಸಿಗಳನ್ನು ನೆಟ್ಟು ಬೆಳೆಸಬೇಕಿದೆ ಎಂದು ಶಾಸಕ ಅನೀಲ ಬೆನಕೆ ಅವರು ಅಭಿಪ್ರಾಯಪಟ್ಟರು.

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ತೋಟಗಾರಿಕಾ ಸಂಘದ ಸಹಯೋಗದಲ್ಲಿ ನಗರದ ಕ್ಲಬ್ ರಸ್ತೆ ಹತ್ತಿರವಿರುವ ಹ್ಯೂಮ್ ಪಾರ್ಕ್ ನಲ್ಲಿ ಜುಲೈ 1ರಿಂದ ಜುಲೈ 3ರವರೆಗೆ 3ದಿನಗಳ ಕಾಲ ನಡೆಯುವ ಸಸ್ಯ ಸಂತೆ ಮತ್ತು ತೋಟಗಾರಿಕಾ ಅಭಿಯಾನ-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ಪಕ್ಷಿ ಸಂಕುಲ ಜೀವಿಸುವುದಕ್ಕೆ ಸಾಕಷ್ಟೂ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಸಸ್ಯ ಸಂತೆ ಮೂಲಕ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಕೈಗೊಂಡಿದೆ ಎಂದು ಶಾಸಕ ಅನೀಲ ಬೆನಕೆ ಅವರು ಶ್ಲಾಘಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭಾಗವಹಿಸಿ ಜಿಲ್ಲೆಯ 9 ತೋಟಗಾರಿಕಾ ಕ್ಷೇತ್ರಗಳಲ್ಲಿ ಬೆಳೆದ ವಿವಿಧ ತಳಿಯ ಹೂವು, ಹಣ್ಣು, ತರಕಾರಿ, ಔಷಧಿ, ಅಲಂಕಾರಿಕ ಸಸಿಗಳನ್ನು ಈ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜಿಲ್ಲೆಯ ಜನರು ಈ ಸಸ್ಯ ಸಂತೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಮಹಾಂತೇಶ ಮುರಗೋಡ ಅವರು ಮಾತನಾಡಿ ನಗರ ಹಾಗೂ ಜಿಲ್ಲೆಯ ಗ್ರಾಮೀಣ ಜನರಲ್ಲಿ ತೋಟಗಾರಿಕೆ ಕುರಿತು ಆಸಕ್ತಿ ಬೆಳೆಸಲು, ತೋಟಗಾರಿಕಾ ವಲಯವನ್ನು ಪ್ರೋತ್ಸಾಹಿಸಲು ಈ ಮೇಳ ಆಯೋಜಿಸಲಾಗಿದೆ. 3 ದಿನಗಳ ಕಾಲ ನಡೆಯುವ ಈ ಸಸ್ಯ ಸಂತೆ ಸಾರ್ವಜನಿಕರು ಭಾಗವಹಿಸಿ ಮೇಳದ ಉಪಯೋಗ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಸಸ್ಯ ಸಂತೆ ಪರಿವೀಕ್ಷಣೆ:

ಸಸ್ಯ ಸಂತೆ ಮತ್ತು ತೋಟಗಾರಿಕಾ ಅಭಿಯಾನ ಉದ್ಘಾಟನೆ ಬಳಿಕ ಶಾಸಕ ಅನೀಲ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದ್ದ ತರಹೇವಾರಿ ತಳಿಯ ಸಸಿ, ಗಿಡಗಳನ್ನು ವೀಕ್ಷಿಸಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಮಹಾಂತೇಶ ಮುರಗೋಡ ಹಾಗೂ ರೈತರಿಂದ ಮಾಹಿತಿ ಪಡೆದುಕೊಂಡರು.

ಮೇಳದಲ್ಲಿ ತರಹೇವಾರಿ ಸಸಿ/ಗಿಡಗಳು:

ಮೇಳದಲ್ಲಿ ಉತ್ತಮ ಗುಣಮಟ್ಟದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ಬಗೆ ಬಗೆಯ ಹಣ್ಣಿನ ಗಿಡಗಳು, ಅಣಬೆ ಪ್ರಯೋಗಾಲದಲ್ಲಿ ಉತ್ಪಾದನೆ ಮಾಡುತ್ತಿರುವ ಅಣಬೆ ಬೀಜ, ಅಣಬೆ ಬೆಳೆ ಮತ್ತು RTF ಬ್ಯಾಗಗಳು, ಜೇನು ಉತ್ಪನ್ನಗಳು, ಬೆಳಗಾವಿ ಜೈವಿಕ ಕೇಂದ್ರದಲ್ಲಿ ಉತ್ಪಾದಿಸಿದ ವಿವಿಧ ಜೈವಿಕ
ಗೊಬ್ಬರಗಳು ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಏರೆ ಜಲ, ಎರೆಹುಳು ಗೊಬ್ಬರವನ್ನು ರೈತರಿಗೆ ಇಲಾಖೆಯ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ.

ತೋಟಗಾರಿಕೆ ಅಭಿಯಾನ ಹಾಗೂ ಸಸ್ಯ ಸಂತೆ ಅಭಿಯಾನದಡಿ ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ಪೇರಲ, ಚಿಕ್ಕು, ಕರಿಬೇವು, ಲಿಂಬೆ, ನೇರಳೆ, ತೆಂಗು, ಇನ್ನಿತರ ಕಸಿ/ಸಸಿಗಳು, ಅಲಂಕಾರಿಕ ಸಸಿಗಳು, ಹೂವಿನ ಗಿಡಗಳು, ತರಕಾರಿ ಸಸಿಗಳನ್ನೂ ಇಲಾಖೆಯಿಂದ ಯೋಗ್ಯ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ.

ಜನರಿಗಾಗಿ 2ಲಕ್ಷ ವಿವಿಧ ಸಸಿಗಳು:

ಜಿಲ್ಲೆಯಲ್ಲಿ ಒಟ್ಟು 24 ತೋಟಗಾರಿಕೆ ಕ್ಷೇತ್ರಗಳ ಪೈಕಿ ಮುಖ್ಯವಾಗಿ 9 ಕಡೆ ಸಸ್ಯಾಭಿವೃದ್ಧಿ ಪಡಿಸಲಾಗಿದ್ದು, ಖಾನಾಪೂರ ತಾಲೂಕಿನ ಶೇಡಗಳ್ಳಿ ತೋಟಗಾರಿಕೆ ಕ್ಷೇತ್ರ, ಹುಕ್ಕೇರಿ ತಾಲೂಕಿನ ಹಿಡಕಲ್ ತೋಟಗಾರಿಕೆ ಕ್ಷೇತ್ರ, ಗೋಕಾಕ ತಾಲೂಕಿನ ಧೂಪಧಾಳ ತೋಟಗಾರಿಕೆ ಕ್ಷೇತ್ರ, ಕಿತ್ತೂರು ತಾಲೂಕಿನ ಕಿತ್ತೂರು ತೋಟಗಾರಿಕೆ ಕ್ಷೇತ್ರ, ರಾಮದುರ್ಗ ತಾಲೂಕಿನ ರಾಮದುರ್ಗ ಕಛೇರಿ ಸಸ್ಯಾಗಾರ ಸವದತ್ತಿ ತಾಲೂಕಿನ ಮುನವಳ್ಳಿ, ಯಕ್ಕೇರಿ ಮತ್ತು ಉಗರಗೋಳ
ತೋಟಗಾರಿಕೆ ಕ್ಷೇತ್ರಗಳು ಹಾಗೂ ಬೆಳಗಾವಿ ಹ್ಯೂಮ್ ಪಾರ್ಕ್ ನಲ್ಲಿ ರೈತರಿಗಾಗಿಯೇ ಸುಮಾರು 2 ಲಕ್ಷ ವಿವಿಧ ಸಸಿಗಳನ್ನು ಯೋಗ್ಯ ದರದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಸಸ್ಯ ಸಂತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.

****************

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *