Breaking News

ಕ್ರಾಂತಿಯ ನೆಲ,ಬೆಳಗಾವಿಯಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಅದ್ದೂರಿ ಜೊತೆಗೆ ಭರ್ಜರಿ…

ಬೆಳಗಾವಿ, -ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ಮೊದಲಿನಂತೆ ಸಡಗರ-ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಗಿತ್ತು. ಆದರೆ ಈ‌ ಬಾರಿ ಅದ್ಧೂರಿಯಾಗಿ ಆಚರಿಸಲು ಅನೇಕರು ಒತ್ತಾಯಿಸಿದ್ದಾರೆ.
ಆದ್ದರಿಂದ ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುವುದು.

ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಅತಿಥಿಗಳ ಸ್ವಾಗತ, ಧ್ವಜಾರೋಹಣ ವೇದಿಕೆ, ಗಣ್ಯರಿಗೆ ಆಸನ ವ್ಯವಸ್ಥೆ, ಪರೇಡ್ ಸಿದ್ಧತೆ ಸೇರಿದಂತೆ ಪ್ರತಿಯೊಂದು ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅನುಕೂಲವಾಗುವಂತೆ ಉಪ ಸಮಿತಿಗಳನ್ನು ರಚಿಸಲಾಗುವುದು.
ಉಪ ಸಮಿತಿಯ ಅಧ್ಯಕ್ಷರು ಸಭೆಯನ್ನು ನಡೆಸುವ ಮೂಲಕ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪೊಲೀಸ್, ಸಶಸ್ತ್ರ ಪಡೆ ಸೇರಿಂದತೆ ಈ ಬಾರಿ ಎನ್.ಸಿ.ಸಿ., ಸ್ಕೌಟ್ಸ್-ಗೈಡ್ಸ್, ಭಾರತ ಸೇವಾದಳ, ಗೃಹರಕ್ಷಕ ದಳ, ವಿದ್ಯಾರ್ಥಿಗಳ ತಂಡಗಳಿಗೆ ಕೂಡ ಪರೇಡ್ ನಲ್ಲಿ ಅವಕಾಶ ಕಲ್ಪಿಸಲಾಗುವುದು. ಒಟ್ಟಾರೆ 16 ತಂಡಗಳು ಪರೇಡ್ ನಲ್ಲಿ ಭಾಗವಹಿಸಲಿವೆ.
ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಲು ಅಗತ್ಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕ್ರೀಡಾಂಗಣದಲ್ಲಿ ವೈದ್ಯಕೀಯ ತಂಡಗಳನ್ನು ಹಾಗೂ ಒಂದು ಸುಸಜ್ಜಿತ ಅಂಬ್ಯುಲೆನ್ಸ್ ನಿಯೋಜಿಸಬೇಕು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರನ್ನು ಅವರ ಮನೆಗಳಿಗೆ ತೆರಳಿ ಸನ್ಮಾನಿಸಲಾಗುವುದು. ಉಪ ವಿಭಾಗಾಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ವತಿಯಿಂದ ನಗರದ ಪ್ರಮುಖ ಸ್ಥಳಗಳು, ವೃತ್ತಗಳನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡುವ ಮೂಲಕ ಸಂಭ್ರಮದ ವಾತಾವರಣ ಮೂಡಿಸಬೇಕು. ಇದೇ ರೀತಿ ಮೈದಾನದಲ್ಲಿ ವೇದಿಕೆ, ಆಸನ ವ್ಯವಸ್ಥೆ, ಅಲ್ಪೋಪಹಾರ ಮತ್ತಿತರ ವ್ಯವಸ್ಥೆ ಮಾಡಬೇಕು ಎಂದರು.

ಪ್ಲ್ಯಾಸ್ಟಿಕ್ ಧ್ವಜ ಬಳಕೆ-ಮಾರಾಟ ನಿಷೇಧ:

ಪ್ಲ್ಯಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಆದ್ದರಿಂದ ಪ್ಲ್ಯಾಸ್ಟಿಕ್ ಧ್ವಜ ಬಳಕೆಯನ್ನು ಮಾಡದಂತೆ ಕ್ರಮ‌ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಆಗಸ್ಟ್ 15 ರಂದು ಬೆಳಿಗ್ಗೆ ಎಲ್ಲ ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಇತರೆ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲು ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಗಡಾದಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಲಹೆ ಸೂಚನೆಗಳನ್ನು ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****
ಆ.13 ರಿಂದ ಜಿಲ್ಲೆಯಲ್ಲಿ “ಹರ್ ಘರ್ ತಿರಂಗಾ” ಕಾರ್ಯಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, ಜು.25(ಕರ್ನಾಟಕ ವಾರ್ತೆ): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ “ಹರ್ ಘರ್ ತಿರಂಗಾ” ಕಾರ್ಯಕ್ರಮದ ಮೂಲಕ ಪ್ರತಿಯೊಂದು ಮನೆ, ಸರಕಾರಿ ಕಚೇರಿ ಹಾಗೂ ಸಂಘ-ಸಂಸ್ಥೆಗಳ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಹರ್-ಘರ್ ತಿರಂಗಾ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅದೇ ರೀತಿ ಜಿಲ್ಲೆಯ ಎಲ್ಲ ಮನೆಗಳು, ಸರಕಾರಿ ಕಚೇರಿಗಳು ಹಾಗೂ ಸಂಘ-ಸಂಸ್ಥೆಗಳ ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಜನಪ್ರತಿನಿಧಿಗಳು, ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಟ್ವೀಟ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಇದೇ ರೀತಿ ಬ್ಯಾನರ್, ಕರಪತ್ರಗಳನ್ನು ಮುದ್ರಿಸಿ ಪ್ರಚಾರ ಕೈಗೊಳ್ಳಲಾಗುತ್ತದೆ.
ಸಾರ್ವಜನಿಕರು, ಎಲ್ಲ ಸರಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರೂ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಭಾರತ ಸರಕಾರವು ಧ್ವಜಸಂಹಿತೆಯಲ್ಲಿ ಕೆಲ ಮಾರ್ಪಾಡು ಮಾಡುವ ಮೂಲಕ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ಧ್ವಜಾರೋಹಣಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಧ್ವಜಾರೋಹಣಕ್ಜೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯ ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳ ಸಾಧಕರ ಹೇಳಿಕೆಗಳನ್ನು ಪ್ರಚುರಪಡಿಸುವ ಮೂಲಕ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಎಲ್ಲೆಡೆ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ತಿಳಿಸಿದರು.

ಸಾರ್ವಜನಿಕರಿಗೆ ಧ್ವಜಗಳ ಪೂರೈಕೆ:

ಸರಕಾರವು ಪೂರೈಸುವ ಧ್ವಜಗಳನ್ನು ಸಂಬಂಧಿಸಿದ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುವುದು.
ಸಾರ್ವಜನಿಕರಿಂದ ಧ್ವಜಗಳನ್ನು ರೂ. 25 ಗೆ ನೀಡಲಾಗುವುದು. ಪ್ರತಿ ಕುಟುಂಬಗಳಿಗೆ ಧ್ವಜಗಳನ್ನು ತಲುಪಿಸುವ ದಿಸೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಗಡಾದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.
ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
****

Check Also

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.