ಜಮೀನು ವಿವಾದ: ಶನಿವಾರ ಠಾಣೆ ಎದುರು ಬೃಹತ್ ಪ್ರತಿಭಟನೆಗೆ ನಿರ್ಧಾರ
ಬೆಳಗಾವಿ: ಗೋಕಾಕ ತಾಲೂಕಿನ ನಂದಗಾಂವ ಗ್ರಾಮದ ರಿಸನಂ ೫೩೩ ಕ್ಷೇತ್ರದ ೨.೨೪ ಎಕರೆ ಕೃಷಿ ಜಮೀನು ವಿಚಾರ ಸಂಬಂಧ ತಮಗೆ ಕಿರುಕುಳ ನೀಡಲಾಗುತ್ತಿದ್ದು, ಅದನ್ನು ತಡೆಯುವಂತೆ ಒತ್ತಾಯಿಸಿ ಜು. ೩೦ ರಂದು ಘಟಪ್ರಭಾ ಮತ್ತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮಲ್ಲಪ್ಪ ಕಾಡಪ್ಪ ಮಗದುಮ್ಮ, ರಮೇಶ ಮಲ್ಲಪ್ಪ ಮಗದುಮ್ಮ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಹೊಲದಲ್ಲಿ ಬೆಳೆದ ಕಬ್ಬಿನ ಬೆಳೆಯನ್ನೂ ಹಾಳು ಮಾಡಿ ನಮ್ಮ ಕುಟುಂಬಕ್ಕೆ ಅನವಶ್ಯಕವಾಗಿ ಕಿರುಕುಳ ನೀಡಲಾಗುತ್ತಿದೆ. ಈ ಕಿರುಕುಳದಿಂದ ನಾವು ಬೇಸತ್ತು ಹೋಗಿದ್ದೇವೆ. ನಮ್ಮ ಜೀವನ ಎಲ್ಲವೂ ಮುಗಿದಿದೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಿ ನಾವು ಎಲ್ಲದಕ್ಕೂ ಗಟ್ಟಿಯಾಗಿದ್ದೇವೆ. ಸಾಯಲು ನಾವೆಲ್ಲರೂ ಸಿದ್ಧರಿದ್ದವೆ. ನಮಗೆ ಅನ್ಯಾಯವಾಗಿದೆ. ನಮಗೆ ನ್ಯಾಯ ದೊರೆಯದಿದ್ದರೆ, ನಮ್ಮ ಕುಟುಂಬದ ಸದಸ್ಯರೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಮ್ಮ ಹೊಲದಲ್ಲಿ ಬೆಳೆದ ಕಬ್ಬಿನ ಬೆಳೆಯನ್ನು ನಾಶಪಡಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಮೇಶ ಮಗದುಮ್ಮ, ಇಲ್ಲಿ ಹುಲ್ಲು ಕಡ್ಡಿಯೂ ಬೆಳೆಯುತ್ತಿರಲಿಲ್ಲ. ಈ ಭೂಮಿ ಉಪ್ಪಿನಂಶದಿಂದ ಕೂಡಿತ್ತು. ನಾವು ಕಷ್ಟಪಟ್ಟು ಇಲ್ಲಿ ಈಗ ಬೆಳೆ ತೆಗೆಯುತ್ತ ಬಂದಿದ್ದೇವೆ. ಆದರೆ, ನಮ್ಮ ಕುಟುಂಬಕ್ಕೆ ಅನವಶ್ಯಕವಾಗಿ ಕಿರುಕುಳ ನೀಡಲಾಗುತ್ತಿದೆ. ನಮ್ಮ ಮೇಲೆ ಜಾತಿ ನಿಂದನೆ ಪ್ರಕರಣ ಹಾಕುವುದಾಗಿಯೂ ಬೆದರಿಕೆ ಹಾಕಲಾಗುತ್ತಿದೆ. ಈಗ ನಮಗೆ ಧಿಕ್ಕೆ ತೋಚುತ್ತಿಲ್ಲ. ಹಾಗಾಗಿ, ಅನಿವಾರ್ಯವಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು.