Breaking News

ಬೇಸಿಗೆಯಲ್ಲಿ ನಿರಂತರವಾಗಿ ಧ್ವಜ ಹಾರಿಸಲು ಪ್ರಯತ್ನ

ಬೆಳಗಾವಿ ಕೋಟೆಕೆರೆ ಆವರಣದಲ್ಲಿ ಬೃಹತ್ ಧ್ವಜಾರೋಹಣ; ತಿರಂಗಾ ಯಾತ್ರೆ
——————————————————–
ನೀಲಿ ಬಾನಂಗಳದಲ್ಲಿ ಬೃಹತ್ ತಿರಂಗಾ

ಬೆಳಗಾವಿ, ): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಘಳಿಗೆಯಲ್ಲಿ ದೇಶದ‌ ಅತೀ ಎತ್ತರದ ಧ್ವಜಸ್ತಂಭಗಳಲ್ಲಿ ಒಂದಾಗಿರುವ ಇಲ್ಲಿನ ಕೋಟೆಕೆರೆ ಆವರಣದ 110 ಮೀಟರ್ ಎತ್ತರದ ಧ್ವಜಸ್ತಂಭದಲ್ಲಿ 9600 ಚದುರ ಅಡಿಯ ಬೃಹತ್ ತ್ರಿವರ್ಣ ಧ್ವಜವು ಜಿಟಿಜಿಟಿ ಮಳೆಯ ನಡುವೆಯೂ ನೀಲಿಬಾನಂಗಳಲ್ಲಿ ಹಾರಿತು.

110 ಮೀಟರ್ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ 36.60×24.40(120×90 ಅಡಿ=9600 ಚದುರ ಅಡಿ) ಅಳತೆಯ ತ್ರಿವರ್ಣ ಧ್ವಜವು ಆಕಾಶದಲ್ಲಿ ಗರಿಬಿಚ್ಚಿ ಪಟಪಟನೇ ಹಾರಾಡುತ್ತಿದ್ದಾಗ ಹಿನ್ನೆಲೆಯಲ್ಲಿ ವಂದೇ ಮಾತರಂ ಹಾಡು ಕೇಳಿ ರೋಮಾಂಚನಗೊಂಡ ನೆರೆದ ಜನರು ಭಾರತ ಮಾತಾಕೀ ಜೈ ಎಂದು ಜಯಘೋಷ ಹಾಕಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ “ಹರ್ ಘರ್ ತಿರಂಗಾ” ಅಭಿಯಾನದ ಅಂಗವಾಗಿ ಕೋಟೆಕೆರೆ ಆವರಣದ ಬೃಹತ್ ಧ್ವಜಸ್ತಂಭದಲ್ಲಿ ಶನಿವಾರ(ಆ.13) ಬೃಹತ್ ಧ್ವಜಾರೋಹಣ ನಡೆಯಿತು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅನಿಲ್ ಬೆನಕೆ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ ಅಂಗವಾಗಿ ದೇಶದಾದ್ಯಂತ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಭಾಗವಹಿಸಿ ಅಮೃತ ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಬೆಳಗಾವಿ ಕೋಟೆಕೆರೆಯಲ್ಲಿರುವ ದೇಶದ ಬೃಹತ್ ಧ್ವಜವನ್ನು ನಿರಂತರವಾಗಿ ಹಾರಿಸುವ ಯೋಚನೆಯಿದೆ. ಆದರೆ ಬೃಹತ್ ಧ್ವಜವು ಮಳೆಗಾಲದಲ್ಲಿ ನೆನೆದು ಹರಿಯುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಬೇಸಿಗೆ ಕಾಲದಲ್ಲಿ ನಿರಂತರವಾಗಿ ಧ್ವಜವನ್ನು ಹಾರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, “ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹನೀಯರನ್ನು ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ನಾವು ಸ್ಮರಿಸಬೇಕಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶದ ಬಗ್ಗೆ ಹೆಮ್ಮೆಯಾಗುತ್ತದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಬರುತ್ತದೆ” ಎಂದು ಹೇಳಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, “ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ಭಾರತ ಸರ್ಕಾರವು ಧ್ವಜಸಂಹಿತೆಯನ್ನು ಮಾರ್ಪಾಡು ಮಾಡಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ಆಗಸ್ಟ್ 13 ರಿಂದ ಆ.15 ರ ಸಂಜೆಯವರೆಗೆ ನಿರಂತರವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಭಿಯಾನದಲ್ಲಿ ಭಾಗವಹಿಸಬಹುದು” ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯರಾದ ಡಾ.ಸಾಬಣ್ಣ ತಳವಾರ, ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಿರಂಗಾ ಯಾತ್ರೆ; ಕಾಲ್ನಡಿಗೆ ಜಾಥಾ:

ಧ್ವಜಾರೋಹಣದ ಬಳಿಕ ಕೋಟೆಕೆರೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಹಾಯ್ದು ಚೆನ್ನಮ್ಮ ವೃತ್ತದವರೆಗೆ ಕಾಲ್ನಡಿಗೆ ಜಾಥಾ ಹಾಗೂ 75 ಮೀಟರ್ ಉದ್ದದ ತಿರಂಗಾ ಯಾತ್ರೆ ನಡೆಯಿತು.
ಅನೇಕ ಗಣ್ಯರು, ಅಧಿಕಾರಿಗಳು, ನಾಗರಿಕರು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ‌ಪಾಲ್ಗೊಂಡಿದ್ದರು.

ಅಶೋಕ ಸರ್ಕಲ್, ಆರ್.ಟಿ.ಓ. ವೃತ್ತದ‌ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಚೆನ್ನಮ್ಮ ವೃತ್ತದವರೆಗೆ ಜಾಥಾ ನಡೆಯಿತು. ರಸ್ತೆಯ ಇಕ್ಕೆಗಳಲ್ಲಿ ನೆರೆದಿದ್ದ ಜನರು ವಂದೇ ಮಾತರಂ ಹಾಗೂ ಭಾರತ ಮಾತೆಗೆ ಜಯಘೋಷಣೆ ಹಾಕಿದರು.
75 ಮೀಟರ್ ಉದ್ದದ ತಿರಂಗಾ ಹಿಡಿದು ಮಕ್ಕಳು ಸಾಗುತ್ತಿರುವಾಗ ಎರಡೂ ಕಡೆಗಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ನಾಗರಿಕರು ದೇಶಪ್ರೇಮವನ್ನು ಮೆರೆದರು.ಶಾಸಕ ಅನಿಲ್ ಬೆನಕೆ‌ ಅವರು ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಕೊನೆಯಲ್ಲಿ ವಂದೇ ಮಾತರಂ, ಬೋಲೋ‌ ಭಾರತ ಮಾತಾ ಕೀ ಜೈ ಘೋಷಣೆಗಳ ಕರತಾಡನ ಹಾಗೂ ರಾಷ್ಟ್ರಗೀತೆಯೊಂದಿಗೆ ಜಾಥಾ ಸಮಾರೋಪಗೊಂಡಿತು.
****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *