ಬೆಳಗಾವಿ, ಸೆ.13(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿದ್ದ ಬೆಳೆಹಾನಿಯ ಕುರಿತು ತಕ್ಷಣವೇ ಜಂಟಿ ಸಮೀಕ್ಷೆ ಕೈಗೊಂಡು 11,234 ರೈತರಿಗೆ ಒಟ್ಟಾರೆ 17.01 ಕೋಟಿ ರೂಪಾಯಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಜುಲೈ ಹಾಗೂ ಆಗಸ್ಟ್ ಮಾಹೆ ಸೇರಿದಂತೆ ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿತ್ತು.
ತಕ್ಷಣವೇ ಕಾರ್ಯಪ್ರವೃತ್ತಗೊಂಡ ಜಿಲ್ಲಾಡಳಿತವು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆಯನ್ನು ಕೈಗೊಂಡು ಅತ್ಯಂತ ತ್ವರಿತವಾಗಿ ರೈತರಿಗೆ ಪರಿಹಾರ ಒದಗಿಸಿದೆ.
ಜಿಲ್ಲೆಯಲ್ಲಿ ಹೆಸರು, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಸೋಯಾಬಿನ್ ಮತ್ತಿತರ ಬೆಳೆಹಾನಿಯಾಗಿತ್ತು.
ಜಂಟಿ ಸಮೀಕ್ಷೆ ಆಧರಿಸಿ ಸರಕಾರದ ಮಾರ್ಗಸೂಚಿ ಪ್ರಕಾರ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆಹಾನಿ ಪರಿಹಾರವನ್ನು ಬಿಡುಗಡೆಗೊಳಿಸಲಾಗಿದ್ದು, ನಾಳೆಯೇ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 11,234 ರೈತರ ಖಾತೆಗೆ ಒಟ್ಟಾರೆ 17,01,01,195 ರೂಪಾಯಿ ಜಮೆಯಾಗಲಿದೆ ಎಂದು ಹೇಳಿದ್ದಾರೆ.
ಬೃಹತ್ ಮರ ಬಿದ್ದು ಯುವಕನ ಸಾವು-ತಕ್ಷಣವೇ ಐದು ಲಕ್ಷ ಪರಿಹಾರ ಬಿಡುಗಡೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ ನಗರದ ಆರ್.ಟಿ.ಓ. ವೃತ್ತದ ಸಮೀಪ ಬೃಹತ್ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ ಯುವಕನ ವಾರಸುದಾರರಿಗೆ ತಕ್ಷಣವೇ ಐದು ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ತಾಲ್ಲೂಕು ತುಮ್ಮರಗುದ್ದಿ ಗ್ರಾಮದ ಸಿದ್ದನಹಳ್ಳಿ ಮಜರೆ ನಿವಾಸಿ ರಾಕೇಶ್ ಲಗಮಪ್ಪ ಸುಲಧಾಳ(27) ಎಂಬ ಯುವಕ ಮಂಗಳವಾರ (ಸೆ.13) ಬೆಳಗಾವಿ ನಗರದ ಆರ್.ಟಿ.ಓ. ವೃತ್ತದ ಮರಾಠಾ ಮಂಡಳ ಶಾಲೆಯ ಬಳಿ ಬೈಕ್ ಮೇಲೆ ತೆರಳುತ್ತಿರುವಾಗ ಮಳೆ-ಗಾಳಿಯಿಂದ ಬೃಹತ್ ಮರ ಬಿದ್ದು ಮೃತಪಟ್ಟಿದ್ದನು.
ಈ ಕುರಿತು ಬಿಮ್ಸ್ ನಿಂದ ಮರಣೋತ್ತರ ವರದಿ ಪಡೆದುಕೊಂಡು ತಕ್ಷಣವೇ ಮೃತ ಯವಕನ ತಾಯಿ ಹಾಲವ್ವ ಲಗಮಪ್ಪ ಸುಲಧಾಳ ಅವರ ಆಕ್ಸಿಸ್ ಬ್ಯಾಂಕ್ ಖಾತೆಗೆ ಐದು ಲಕ್ಷ ರೂಪಾಯಿ ಪರಿಹಾರಧನವನ್ನು ಬೆಳಗಾವಿ ತಹಶೀಲ್ದಾರ ಕಚೇರಿಯಿಂದ ಆರ್.ಟಿ.ಜಿ.ಎಸ್. ಮೂಲಕ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಮೃತ ಯುವಕ ರಾಕೇಶ್ ಲಗಮಪ್ಪ ಸುಲಧಾಳ ಅವರ ಕುಟುಂಬಕ್ಕೆ ಸಾಂತ್ವನವನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.