ಬೆಳಗಾವಿ
ಪ್ರಸ್ತಕ ವರ್ಷದಿಂದ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಬೆಳಗ್ಗೆಯಿಂದ ಶುರುವಾಗಿರುವ ಹೋರಾಟ ಅಹೋರಾತ್ರಿಯೂ ಮುಂದುವರೆದಿದೆ.
ಬೆಳಗ್ಗೆ ಏನಾಯ್ತು…
ನಗರದ ಅಶೋಕ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ರೈತರು, ಮಳೆಯ ನಡುವೆಯೇ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಅರೆಬೆತ್ತಲೆಯಾಗಿ ಪ್ರತಿಭಟಿಸಿದರು. ಕೆಲ ಕಾಲ ಚನ್ನಮ್ಮ ವೃತ್ತದಲ್ಲಿಯೇ ಪ್ರತಿಭಟಿಸುತ್ತಿದ್ದ ಬಳಿಕ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆಂದು ಆಗಮಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಲು ಪ್ರತಿಭಟನಾಕಾರರು ಪ್ರಯತ್ನಿಸಿದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತೀವ್ರ ವಾಗ್ವಾದ ಹಾಗೂ ನುಕುನುಗ್ಗಲು ಏರ್ಪಟ್ಟಿತು. ಆಕ್ರೋಶಗೊಂಡ ರೈತರು ಬ್ಯಾರಿಕೇಡ್ ಬಿಟ್ಟು ಜಿಲ್ಲಾಧಿಕಾರಿ ಆವರಣದ ಕಬ್ಬಿಣ ಸರಳುಗಳ ಕಾಪೌಂಡ್ ಹಾರಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ರು ಹರಸಾಹಸ ಪಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಜಿಲ್ಲಾಧಿಕಾರಿ ಕರೆಸುವಂತೆ ಒತ್ತಾಯಿಸಿದ ಬಳಿಕ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಆಗಮಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜಾರಿ, ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿಪಡಿಸಬೇಕು. ಜತೆಗೆ ಸರಕಾರಕ್ಕೆ ಪ್ರತಿ ಟನ್ ಕಬ್ಬಿಗೆ 4500 ರೂ.ತೆರಿಗೆ ಸಲ್ಲಿಕೆಯಾಗುತ್ತದೆ. ಸರಕಾರಕ್ಕೆ ಸಲ್ಲಿಕೆಯಾಗುವ 4500 ರೂ. ತೆರಿಗೆ ಹಣದಲ್ಲಿ ರೈತರಿಗೆ 2000 ರೂ.ಬೆಂಬಲ ಬೆಲೆ ಘೋಷಿಸಿ, ಒಟ್ಟಾರೆ ಪ್ರತಿ ಟನ್ ಕಬ್ಬಿಗೆ 5,500 ರೂ. ನೀಡಬೇಕು ಎಂದು ಆಗ್ರಹಿಸಿದರು. ಸರಕಾರ ಘೋಷಿಸಿರುವ ಎಫ್.ಆರ್.ಪಿ ದರವು ರೈತರಿಗೆ ಮೋಸದ ದರವಾಗಿದೆ. 27 ಸಾವಿರ ಕೋಟಿ ರೂ.ಗಳಿಗೂ ಅಧಿಕ ಕಬ್ಬಿನ ಇತರ ಉತ್ಪನ್ನಗಳಿಂದ ತೆರಿಗೆ ಪಡೆಯುವ ಸರಕಾರ ಕಬ್ಬು ಬೆಳೆಯುವ ರೈತರಿಗೆ ಎಫ್.ಆರ್.ಪಿ ಬೆಲೆಯಲ್ಲಿ ಮೋಸ ಮಾಡುತ್ತಿದೆ. ಕಬ್ಬಿನ ಇತರ ಉತ್ಪನ್ನಗಳಿಂದ ಪಡೆಯುವ ತೆರಿಗೆಯಲ್ಲಿ ಸರಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪ್ರತಿ ಟನ್ ಕಬ್ಬಿನ ಬೆಲೆ 5,500 ರೂ. ನಿಗದಿಗೊಳಿಸುವಂತೆ ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಎಸ್.ಪಿ. ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಸಭೆ ನಡೆಸಿದ್ದರು. ಸಭೆಯು ಸಂಪೂರ್ಣ ವಿಫಲವಾಗಿದೆ. ಕಾರ್ಖಾನೆ ಮಾಲೀಕರು ರೈತರ ಮನವಿಗೆ ಸ್ಪಂದಿಸಿಲ್ಲ. 10 ವರ್ಷಗಳಿಂದ ಕಬ್ಬಿನ ಬೆಲೆಯೂ 2,500 ರೂ.ಗಳಷ್ಟೇ ಇದ್ದು, ಉಳಿದ ಎಲ್ಲ ಕಬ್ಬು ಬೆಳೆಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಕೂಡಲೇ ರಾಜ್ಯದ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರು ಈ ಕುರಿತು ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಚೂನಪ್ಪ ಪೂಜಾರಿ ಎಚ್ಚರಿಸಿದರು.
ಇನ್ನೂ ಪ್ರತಿಭಟನಾನಿರತ ರೈತರು, ಬೃಹತ ಪಾತ್ರೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರೇ ಅಡುಗೆ ಸಿದ್ದಪಡಿಸಿದರು. ಮಧ್ಯಾಹ್ನದ ಊಟ ಸವಿದರು.
ಈಗ ರಾತ್ರಿಯೂ ರೈತರ ಹೋರಾಟ ಮುಂದುವರೆದಿದೆ,ಡಿಸಿ ಕಚೇರಿ ಎದುರು ರೈತರು ಫಲಾವ್ ಮಾಡುವ ಮೂಲಕ ಅಹೋ ರಾತ್ರಿ ಹೋರಾಟ ನಡೆಸಿದ್ದಾರೆ.
ಈ ವೇಳೆ ರೈತ ಮುಖಂಡರಾದ ಶಶಿಕಾಂತ ಪಡಸಲಗಿ, ಸುಭಾಷ ಶಿಬರೂರ, ಮಹೇಶ ಕುಬಕಡ್ಡಿ, ಪ್ರಕಾಶ ನಾಯಕ, ರಾಘವೇಂದ್ರ ನಾಯಕ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು