ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ, ಅಭಿವೃದ್ಧಿಯ ಸರ್ದಾರ,ಅಭಯ ಪಾಟೀಲ್ ಅವರು ಸಿಎಂ ಬೊಮ್ಮಾಯಿ ಅವರ ಗಂಟು ಬಿದ್ದು ಬೆಳಗಾವಿಗೆ ಮಂಜೂರು ಮಾಡಿಸಿದ್ದ 150 ಕೋಟಿ ರೂ ವೆಚ್ಚದ,ನೂರಾರು ಯುಕರಿಗೆ ಉದ್ಯೋಗ ಕೊಡಿಸುವ ಗ್ಲೋಬಲ್ ಎಮರ್ಜಿಂಗ್ ಟೆಕ್ನಲಾಜಿ ಡಿಸೈನ್ ಸೆಂಟರ್,ಬೆಳಗಾವಿಯಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಶಿಪ್ಟ್ ಮಾಡುವ ಹುನ್ನಾರ ನಡೆದಿದೆ.
ಬೆಳಗಾವಿಯಲ್ಲಿ ಗ್ಲೋಬಲ್ ಎಮರ್ಜಿಂಗ್ ಟೆಕ್ನಲಾಜಿ ಡಿಸೈನ್ ಸೆಂಟರ್ ಮಂಜೂರು ಮಾಡಿ,150 ಕೋಟಿ ರೂ ಅನುದಾನವನ್ನು ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು.ಬಜೆಟ್ ನಲ್ಲಿ ಬೆಳಗಾವಿಗೆ ಘೋಷಣೆಯಾದ ಮಹತ್ವದ ಟೆಕ್ನಾಲಜಿ ಸೆಂಟರ್ ಹುಬ್ಬಳ್ಳಿ- ಧಾರವಾಡಕ್ಕೆ ಶಿಪ್ಟ್ ಮಾಡಲು ಹುಬ್ಬಳ್ಳಿ ಧಾರವಾಡದ ಬಿಜೆಪಿಯ ಹಿರಿಯ ನಾಯಕರು ಸಿಎಂ ಬೊಮ್ಮಾಯಿ ಅವರ ಮೇಲೆ ಒತ್ತಡ ತರುತ್ತಿರುವ ವಿಚಾರ ಈಗ ಬಯಲಾಗಿದ್ದು. ಈ ಮಹತ್ವದ ಯೋಜನೆಯನ್ನು ಬೆಳಗಾವಿಯಲ್ಲೇ ಉಳಿಸಿಕೊಳ್ಳಲು ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟ ಮಾಡಲು ಸಜ್ಜಾಗಬೇಕಿದೆ.
ಹುಬ್ಬಳ್ಳಿ- ಧಾರವಾಡದ ಬಿಜೆಪಿಯ ಹಿರಿಯ ನಾಯಕರು,ಟೆಕ್ನಾಲಾಜಿ ಸೆಂಟರ್ ಬೆಳಗಾವಿಯ ಬದಲಾಗಿ,ಹುಬ್ಬಳ್ಳಿ – ಧಾರವಾಡಕ್ಕೆ ಶಿಪ್ಟ್ ಮಾಡಬೇಕೆಂದು,ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗು ಸಿಎಂ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಿದ್ದಾರೆ,ಅದಕ್ಕೆ ಸಿಎಂ ಬೊಮ್ಮಾಯಿ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರದ ಕುರಿತು,ಶಾಸಕ ಅಭಯ ಪಾಟೀಲ ಅವರನ್ನು ವಿಚಾರಿಸಿದಾಗ,ಗ್ಲೋಬಲ್ ಎಮರ್ಜಿಂಗ್ ಟೆಕ್ನಲಾಜಿ ಡಿಸೈನ್ ಸೆಂಟರ್, ಬೆಳಗಾವಿಯಲ್ಲಿ ಸ್ಥಾಪಿಸುವ ಸಂಗತಿಯನ್ನು ಬಜೆಟ್ ನಲ್ಲಿಯೇ ಘೋಷಣೆ ಮಾಡಲಾಗಿದೆ.ಬಜೆಟ್ ನಲ್ಲಿ ಘೋಷಣೆಯಾಗಿರುವ ಯೋಜನೆ ಬೇರೆ ಕಡೆಗೆ ಶಿಪ್ಟ್ ಆಗಲು ಸಾಧ್ಯವೇ ಇಲ್ಲ,ಸಿಎಂ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲೆಯ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿದ್ದು,ಬೆಳಗಾವಿಗೆ ಮಂಜೂರಾದ ಸೆಂಟರ್ ಹುಬ್ಬಳ್ಳಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 15 ರಂದು ಸಿಎಂ ಬೊಮ್ಮಾಯಿ ಅವರು ಬೆಳಗಾವಿಗೆ ಬರುತ್ತಿದ್ದು ಅವರನ್ನು ಭೇಟಿಯಾಗಿ ಗ್ಲೋಬಲ್ ಎಮರ್ಜಿಂಗ್ ಟೆಕ್ನಲಾಜಿ ಡಿಸೈನ್ ಸೆಂಟರ್, ಬೆಳಗಾವಿಯಲ್ಲೇ ಸ್ಥಾಪಿಸುವ ಬಗ್ಗೆ ಚರ್ಚೆ ಮಾಡಿ,ಈ ಕುರಿತು ಮುಖ್ಯಂತ್ರಿಗಳು ಸರ್ಕಾರದ ನಿಲುವು ಪ್ರಕಟಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಅಭಯ ಪಾಟೀಲ ಹೇಳಿದ್ದಾರೆ.