ಬೆಳಗಾವಿ-ಬೆಳಗಾವಿ ರಾಜ್ಯೋತ್ಸವ ಅಂದ್ರೆ ಸಾಕು ,ಕನ್ನಡದ ಹುಡುಗರು ತಾಯಿ ಭುವನೇಶ್ವರಿಯ ತೇರು ಎಳೆದು ಹುಚ್ಚೆದ್ದು ಕುಣೀತಾರೆ,ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ.
ಬೆಳಗಾವಿಯ ಕಣ,ಕಣವೂ ಕನ್ನಡ,ಕನ್ನಡ ಎನ್ನುವ ಹಾಗೆ ಇಲ್ಲಿ ರಾಜ್ಯೋತ್ಸವ ನಡೆಯುತ್ತದೆ. ಈಬಾರಿಯ ರಾಜ್ಯೋತ್ಸವದ ಸಂಬ್ರಮ ಲಂಡನ್ ವರೆಗೂ ಮುಟ್ಟಲಿದೆ. ಅದು ಹೇಗೆ ಅಂದ್ರೆ,ಬೆಳಗಾವಿಯ ರಾಜ್ಯೋತ್ಸವದಲ್ಲಿ ಈ ಬಾರಿ ಹೊಸ ಇತಿಹಾಸವೊಂದು ನಿರ್ಮಾಣವಾಗಲಿದೆ. ೧೦,೦೦೦ ಅಡಿಗಳ ಕರ್ನಾಟಕದ ಬಾವುಟದ ಮೆರವಣಿಗೆಯನ್ನು ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಕನ್ನಡಿಗರು ಮಾಡಲಿದ್ದಾರೆ.
ಕನ್ನಡ ಮನಸ್ಸುಗಳ ತಂಡ ಹಾಗೂ ಬೆಳಗಾವಿ ಕನ್ನಡಿಗರ ಸಹಯೋಗದಲ್ಲಿ ಈ ವಿಶಿಷ್ಠವಾದ ಕಾರ್ಯಕ್ರಮ ಜರುಗಲಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯೋತ್ಸವದಿಂದ ವಂಚಿತರಾಗಿದ್ದ ಕನ್ನಡಿಗರಿಗೆ ಈ ಬಾವುಟದ ಮೆರವಣಿಗೆ ಹೊಸ ಉತ್ಸಾಹವನ್ನು ನೀಡಲಿದೆ. ಈ ಬೃಹತ್ ಬಾವುಟದ ಮೆರವಣಿಗೆ ವಿಶ್ವದಾಖಲೆ ನಿರ್ಮಿಸಿ ಲಂಡನ್ ಬುಕ್ ಆಫ್ ರಿಕಾರ್ಡ್ ಸೇರಲಿದೆ.
“ಬೆಳಗಾವಿ” ಫೇಸ್ ಬುಕ್ ಪುಟದ ರೂವಾರಿ ಕಿರಣ ಮಾಳಣ್ಣವರ ಕಳೆದ ಆರು ತಿಂಗಳಿನಿಂದ ಕನ್ನಡದ ಬಾವುಟದ ಮೆರವಣೆಗೆಗೆ ತಯಾರಿ ನಡೆಸಿದ್ದಾರೆ.ತಮ್ಮ ಪುಟದ ಬಳಗದೊಂದಿಗೆ ದಾಖಲೆ ನಿರ್ಮಿಸಲಿರುವ ಬಾವುಟವನ್ನು ಸಿದ್ಧಪಡಿಸಿ ಹತ್ತು ಸಾವಿರ ಅಡಿ ಉದ್ದದ ಕನ್ನಡದ ಬಾವುಟವನ್ನು,ಬೆಳಗಾವಿಯ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಿ ಹೊಸ ದಾಖಲೆ ನಿರ್ಮಿಸಲಿದ್ದಾರೆ.
“ಬೆಳಗಾವಿ” ಪೇಸ್ ಬುಕ್ ಪುಟ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದೆ,ಕಿರಣ ಮಾಳಣ್ಣವರ ಸೋಶಿಯಲ್ ಮಿಡಿಯಾ ಮೂಲಕ ಕನ್ನಡದ ಜಾಗೃತಿ ಮೂಡಿಸುವ ಕೈಂಕರ್ಯ ಮಾಡುತ್ತಿದ್ದಾರೆ.