ದಾವಣಗೆರೆ, ನವೆಂಬರ್ 27: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹೋದರ ರಮೇಶ್ ಪುತ್ರ ಚಂದ್ರಶೇಖರ್ ಸಾವಿನ ನಿಗೂಢತೆ ಇನ್ನೂ ಹೊರಬಂದಿಲ್ಲ. ಇದೇ ರೀತಿಯ ಮತ್ತೊಂದು ಘಟನೆ ಮರುಕಳಿಸಿದೆ.
ಹೊನ್ನಾಳಿಯಲ್ಲಿ ಕಾರೊಂದು ಹಳ್ಳಕ್ಕೆ ಬಿದ್ದಿದ್ದು, ಚಂದ್ರಶೇಖರ್ ಪತ್ತೆಯಾದ ರೀತಿಯಲ್ಲಿ ವ್ಯಕ್ತಿ ಮೃತದೇಹ ಕಾರಿನ ಹಿಂಬದಿ ಸೀಟ್‌ನಲ್ಲಿ ಪತ್ತೆಯಾಗಿದೆ. ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಬೆಳಗಾವಿ ತಾಲೂಕಿನ ಬಸವನಕುಡುಚಿಯ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಚಂಬಪ್ಪ ಬಣವಣ್ಯಪ್ಪ ಅವರ ಪುತ್ರ ಪ್ರಕಾಶ್ ಚಂಬಪ್ಪ(28) ಸಾವನ್ನಪ್ಪಿದ್ದಾರೆ.
ಚಂದ್ರು ಸಾವು ಪ್ರಕರಣ ಸಾಮ್ಯತೆ ಹೊಂದಿರುವ ಪ್ರಕರಣ ಇದಾಗಿದ್ದು, ಪೊಲೀಸರಿಗೆ ಮತ್ತೆ ಸವಾಲಾಗಿ ಪರಿಣಮಿಸಿದೆ.
ಆರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರಕಾಶ್ ಶಿವಮೊಗ್ಗಕ್ಕೆ ಸ್ನೇಹಿತರನ್ನು ಬಿಡಲು ಕಾರಿನಲ್ಲಿ ಬಂದಿದ್ದರು. ಹೊನ್ನಾಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳಗಾವಿಗೆ ವಾಪಸ್ ಹೋಗುವಾಗ ಮಾಸಡಿ ಗ್ರಾಮ ಸಮೀಪದಲ್ಲಿ ಕಾರು ನಿಯಂತ್ರಣ ತಪ್ಪಿ ಮಹೇಶ್ವರಿ ಹಳ್ಳಕ್ಕೆ ಉರುಳಿ ಬಿದ್ದಿದೆ.
ಕೆಎ 22, ಎಂಎ 5954 ನಂಬರ್‌ನ ಮಾರುತಿ ಎರಿಟಿಗಾ ಕಾರು ಸೇತುವೆಗೆ ಡಿಕ್ಕಿಯಾಗಿ ಪಲ್ಟಿಯಾಗಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಅತೀ ವೇಗದಿಂದ ಅಪಘಾತ ಆಗಿರುವ ಶಂಕೆ ವ್ಯಕ್ತವಾಗಿದೆ. ಮಗನ ಮೃತದೇಹದಲ್ಲಿ ಹಣೆಯ ಮೇಲೆ ಮತ್ತು ಇತರ ಕಡೆಗಳಲ್ಲಿ ಪೆಟ್ಟು ಬಿದ್ದ ಗುರುತುಗಳಿವೆ ಎಂದು ಚಂಬಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ