ಬೆಳಗಾವಿ, ಏ.೧೦(ಕರ್ನಾಟಕ ವಾರ್ತೆ): ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಯುವತಿಯೊಬ್ಬರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನಮ್ಮ ತಾಯಿಗೆ ಮೂತ್ರಕೋಶದ (ಕಸಿ)ಮರುಜೋಡಣೆ ಶಸ್ತ್ರಚಿಕಿತ್ಸೆಯಾಗಿದ್ದು, ಮಾತ್ರೆಗಳು ಖಾಲಿಯಾಗಿವೆ.
ಅವರು ನಿತ್ಯವೂ ಸೇವಿಸಬೇಕಾದ ಮಾತ್ರೆಗಳು ಮುಗಿದು ಹೋಗಿರುವುದರಿಂದ ದಯವಿಟ್ಟು ಮಾತ್ರೆಗಳನ್ನು ಪೂರೈಸಿರಿ ಎಂದು ಸೇಕವ್ವ ಅರಭಾವಿ ಅವರು ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಾರೆ.
ಈ ಕರೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸ್ವತಃ ಬೆಳಗಾವಿ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ತಕ್ಷಣವೇ ಮಾತ್ರೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.
ಇದಲ್ಲದೇ ಶುಕ್ರವಾರ(ಏ.೧೦) ಸಂಜೆ 6 ಗಂಟೆ ಸುಮಾರಿಗೆ ಸಿಎಂ ಕಚೇರಿಯ ಹಿರಿಯ ಅಧಿಕಾರಿಗಳು ಕೂಡ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ, ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದಲ್ಲಿರುವ ಸೇಕವ್ವ ಅರಭಾಂವಿ(45) ಅವಳಿಗೆ ಮಾತ್ರೆಗಳನ್ನು ಪೂರೈಸುವಂತೆ ತಿಳಿಸಿದ್ದರು.
ಕೂಡಲೇ ಸಿಎಂ ಕಚೇರಿಯ ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಬೆಳಗಾವಿಯ ತಹಶೀಲ್ದಾರರ ಮೂಲಕ ಅವರಿಗೆ ಒಂದು ತಿಂಗಳಿಗೆ ಅಗತ್ಯವಿರುವ ಮಾತ್ರೆಗಳನ್ನು ಅವರ ಮನೆ ಬಾಗಿಲಿಗೆ ಕಳುಹಿಸಿಕೊಡುವ ಮೂಲಕ ಬಾಲಕಿಯ ಮನವಿಗೆ ತಕ್ಷಣ ಸ್ಪಂದಿಸಿದ್ದಾರೆ.
***