ಇಂದಿನಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚಿಸಿ, ಜನರಿಗೆ ಪರಿಹಾರ ಒದಗಿಸುವ ಅಧಿವೇಶನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದು ಸುವರ್ಣ ವಿಧಾನಸೌಧಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯವನ್ನು ಮುನ್ನಡೆಸುವ ದಿಸೆಯಲ್ಲಿ ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ. ಹಲವಾರು ಕಾನೂನುಗಳ ರಚನೆಗಳ ಉದ್ದೇಶದಿಂದ ಕಲಾಪ ನಡೆಸಲಾಗುತ್ತಿದೆ ಎಂದರು.
ವಿಧಾನಸಭೆಯಲ್ಲಿ ಭಾವಚಿತ್ರಗಳ ಅನಾವರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಪಸ್ವರ ಎತ್ತಿದ್ದು, ಎಲ್ಲ ಮಹನೀಯರುಗಳ ಭಾವಚಿತ್ರವನ್ನು ಅಳವಡಿಸುವ ಬಗ್ಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪತ್ರದ ವಿಚಾರ ಗಮನಕ್ಕೆ ಬಂದಿಲ್ಲ ಹಾಗೂ ವಿಧಾನಸಭೆಯಲ್ಲಿ ಭಾವಚಿತ್ರ ಅನಾವರಣಗೊಳಿಸುವುದು ಸ್ಪೀಕರ್ ರವರ ವಿವೇಚನೆಗೆ ಬಿಟ್ಟಿರುವ ವಿಚಾರ. ವಿರೋಧಪಕ್ಷದ ನಾಯಕರು ಹಾಗೂ ಸ್ಪೀಕರ್ ರೊಂದಿಗೂ ಈ ವಿಚಾರದ ಬಗ್ಗೆ ಮಾತಾನಾಡಲಾಗುವುದು ಎಂದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಉತ್ತರಿಸಿ, ಸಮುದಾಯಕ್ಕೆ ಮೀಸಲಾತಿ ನೀಡಲು ಯಾವುದೇ ಗಡುವು ನಿಗದಿಪಡಿಸಿಲ್ಲ. ಹಿಂದುಳಿದ ವರ್ಗಗಳ ಆಯೋಗದಿಂದ ಶೀಘ್ರದಲ್ಲಿ ವರದಿ ಬರುವ ವಿಶ್ವಾಸವಿದೆ ಎಂದರು.
****