ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಚರ್ಮಗಂಟುರೋಗ ತಡೆಗಟ್ಟುವ ನಿಟ್ಟಿನಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ.ಕೆ ಫಾಹೀಮ್ ಅವರು ಮಿಂಚಿನ ಸಂಚಾರ ನಡೆಸಿ, ಔಷಧೋಪಚಾರ ಮತ್ತು ಲಸಿಕೆ ದಾಸ್ತಾನು ಪರಿಶೀಲಿಸಿದರು.
ಚರ್ಮಗಂಟು ರೋಗ ಪೀಡಿತ ರಾಸುಗಳನ್ನು ಪರಿಶೀಲನೆ ನಡೆಸಿದ ಅವರು ಬೆಳಗಾವಿ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ, ದಾಸ್ತಾನು ಕೊಠಡಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಬಲಿಯಾಗುತ್ತಿರುವುದನ್ನು ತಡೆಗಟ್ಟಲು ಜಾನುವಾರುಗಳಿಗೆ ಚರ್ಮಗಂಟು ರೋಗ ಲಸಿಕೆ ಮತ್ತು ರೋಗ ಪೀಡಿತ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದನ್ನು ಪರಿಶೀಲನೆ ನಡೆಸಿ, ಕೂಡಲೇ ಪ್ರತಿಯೊಂದು ಗ್ರಾಮದಲ್ಲೂ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಬೇಕು. ಲಸಿಕೆ ಮತ್ತು ಚಿಕಿತ್ಸೆ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಜಿಲ್ಲಾ ಉಪ ನಿರ್ದೇಶಕ ಡಾ.ರಾಜು ಕುಲೇರ್ ಅವರಿಗೆ ಸೂಚನೆ ನೀಡಿದರು.
ಮೃತ ಜಾನುವಾರುಗಳ ಸಮೀಕ್ಷೆ, ಮರಣೋತ್ತರ ಪರೀಕ್ಷೆ ಮತ್ತು ಮೃತಪಟ್ಟ ಜಾನುವಾರುಗಳ ಮಾಲೀಕರುಗಳಿಗೆ ಸರ್ಕಾರ ವಿತರಿಸುತ್ತಿರುವ ಪರಿಹಾರಧನ ಕಾರ್ಯ ಪರಿಶೀಲಿಸಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಕೂಡಲೇ ಸ್ಪಂದಿಸುವಂತೆ ಸಲ್ಮಾ ಫಾಹೀಮ್ ಆದೇಶಿಸಿದರು.
ಚರ್ಮಗಂಟು ರೋಗ ಪತ್ತೆಯಾಗಿರುವ ಪ್ರದೇಶಗಳಿಗೆ ತೆರಳಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ಚರ್ಮಗಂಟು ರೋಗಕ್ಕೆ ನೀಡುವ ಚಿಕಿತ್ಸೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮೀಣ ಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗೊಳ್ಳಬೇಕು ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ರಾಜು ಕುಲೇರ್ ಸೇರಿದಂತೆ ಹಲವರಿದ್ದರು.