ಬೆಳಗಾವಿ :ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರು ಏರ್ಪಡಿಸಿರುವ ಕ್ರಿಕೆಟ್ ಪಂದ್ಯಾವಳಿ ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದೆ.
ಬೆಳಗಾವಿ ನಗರದ ಹೃದಯ ಭಾಗವಾದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಈ ಪ್ರತಿಷ್ಠಿತ ಪಂದ್ಯಾವಳಿ ನಡೆಯುತ್ತಿದೆ. ಕ್ರಿಕೆಟ್ ಪಂದ್ಯಾವಳಿಗೆ ‘ಅನಿಲ್ ಬೆನಕೆ ಟ್ರೋಫಿ’ ಎಂದು ಹೆಸರಿಸಲಾಗಿದೆ. ಪ್ರತಿಷ್ಠಿತ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ವಿಶೇಷ ಬಹುಮಾನ ಘೋಷಣೆ ಮಾಡಲಾಗಿದೆ. ಅದರಲ್ಲೂ ಪಂದ್ಯಾವಳಿಯ ವಿಜೇತರಾಗುವ ತಂಡಕ್ಕೆ ಬರೋಬ್ಬರಿ 5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಎರಡನೇ ಬಹುಮಾನವಾಗಿ ಎರಡೂವರೆ ಲಕ್ಷ ರೂ. ನೀಡಲಾಗುತ್ತದೆ. ಪಂದ್ಯಶ್ರೇಷ್ಠ ಆಟಗಾರನಿಗೆ ಸಹ ದೊಡ್ಡ ಮಟ್ಟದ ಬಹುಮಾನದ ನಗದು ನೀಡಲಾಗುತ್ತಿದೆ. ಮ್ಯಾನ್ ಆಫ್ ದಿ ಸಿರೀಸ್ ಭಾಜನರಾದವರಿಗೆ ರಾಯಲ್ ಎನ್ ಫೀಲ್ಡ್ ಬುಲೆಟ್ ನೀಡಲಾಗುತ್ತದೆ.
ಬೆನಕೆ ಟ್ರೋಫಿ ಇದೀಗ ಭಾರಿ ಸದ್ದು ಮಾಡುತ್ತಿದ್ದು, ಬೆಳಗಾವಿ ಸರ್ದಾರ್ ಮೈದಾನಕ್ಕೆ ಈ ಕ್ರಿಕೆಟ್ ಪಂದ್ಯಾವಳಿಯಿಂದ ವಿಶೇಷ ಮೆರುಗು ಬಂದಿದೆ. ಹಾಳು ಹಂಪಿಯಂತಿದ್ದ ಮೈದಾನ ಈಗ ಕಳೆ ಪಡೆದುಕೊಂಡಿದೆ, ಇಡೀ ಮೈದಾನವನ್ನು ಅತ್ಯಂತ ಸುಂದರವಾಗಿ ಸ್ವಚ್ಛಗೊಳಿಸಿರುವ ಅನಿಲ್ ಬೆನಕೆ ತಂಡ ಟಿಕೆಟ್ ಪಂದ್ಯಾವಳಿಯನ್ನು ವಿಶೇಷವಾಗಿ ನಡೆಸಲು ಮುತುವರ್ಜಿ ವಹಿಸಿರುವುದು ಗಮನ ಸೆಳೆದಿದೆ. ಅನಿಲ್ ಬೆನಕೆ ಅವರು ಶಾಸಕರಾಗುವ ಮೊದಲು ಸಹಾ ಕ್ರಿಕೆಟ್ ಪಂದ್ಯಾವಳಿ ನಡೆಸಿಕೊಂಡು ಬರುತ್ತಿದ್ದರು. ಆ ಸಂಪ್ರದಾಯವನ್ನು ಶಾಸಕರಾದ ನಂತರ ಮುಂದುವರಿಸಿಕೊಂಡು ಬಂದಿದ್ದಾರೆ.
ಈ ಬಾರಿಯಂತೂ ಕ್ರಿಕೆಟ್ ಪಂದ್ಯಾವಳಿಗೆ ವಿಶೇಷ ಮೆರುಗು ಬಂದಿದ್ದು ಕ್ರೀಡಾ ಪ್ರೇಮಿಗಳು ಹುಚ್ಚೆದ್ದು ಕುಣಿಯುವ ವಾತಾವರಣ ಮೂಡಿದೆ. ಶನಿವಾರವೇ ವಿಧ್ಯುಕ್ತವಾಗಿ ಕ್ರಿಕೆಟ್ ಪಂದ್ಯಾವಳಿ ಆರಂಭಗೊಂಡಿದ್ದು ರಜಾದಿನವಾಗಿರುವ ಭಾನುವಾರ ಸಹಸ್ರಾರು ಕ್ರಿಕೆಟ್ ಪ್ರೇಮಿಗಳಿಗೆ ಸರದಾರ್ ಹೈಸ್ಕೂಲ್ ಮೈದಾನ ಆಕರ್ಷಣೆಯಾಗುವುದರಲ್ಲಿಯಾವುದೇ ಸಂದೇಹ ಇಲ್ಲ.