ಬೆಳಗಾವಿ- ಗಡಿ ವಿಚಾರದಲ್ಲಿ ನೆರೆಯ ಮಹಾರಾಷ್ಟ್ರ ಮತ್ತೇ ತನ್ನ ಹಳೇ ಚಾಳಿ ಮುಂದುವರೆಸಿದೆ. ತನ್ನ ಯೋಜನೆಯನ್ನು ಕರ್ನಾಟಕ ನೆಲದಲ್ಲಿ ಜಾರಿಗೊಳಿಸುವ ವಿವಾದಾತ್ಮಕ ನಿರ್ಧಾರ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿದೆ. ಮಹಾರಾಷ್ಟ್ರದ ಪ್ರಚೋದನಾತ್ಮಕ ನಿರ್ಣಯಕ್ಕೆ ಕರ್ನಾಟಕ ಸಿಎಂ ಕೂಡ ಆಕ್ರೋಶ ಹೊರಹಾಕಿದ್ರು. ಇದಕ್ಕೆ ಮಹಾರಾಷ್ಟ್ರ ಪರಿಷತ್ ಸದಸ್ಯೆ ಸಿಎಂ ಬೊಮ್ಮಾಯಿ ಹಾಗೂ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿದ್ದರೂ ಮಹಾರಾಷ್ಟ್ರ ನಾಯಕರು ಮಾತ್ರ ಗಡಿವಿವಾದ ಕೆಣಕುವ ಚಾಳಿ ಮಾತ್ರ ಬಿಡ್ತಿಲ್ಲ. 865 ಗ್ರಾಮಗಳು ನಮಗೆ ಸೇರಬೇಕು ಎಂದು ಪ್ರತಿಪಾದಿಸುತ್ತಲೇ ಬಂದಿರುವ ಮಹಾರಾಷ್ಟ್ರ ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿದೆ. ತನ್ನದೇ ಆರೋಗ್ಯ ವಿಮೆ ಯೋಜನೆಯನ್ನು ಕರ್ನಾಟಕದ 865 ಗ್ರಾಮಗಳ ಜನರಿಗೆ ನೀಡುವ ವಿವಾದಾತ್ಮಕ ನಿರ್ಧಾರವನ್ನು ಮಹಾರಾಷ್ಟ್ರ ತೆಗೆದುಕೊಂಡಿದೆ. ಮಹಾರಾಷ್ಟ್ರ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದೂ ಪಟ್ಟು ಹಿಡಿದಿದ್ದರು. ಇದಕ್ಕೆ ಬೆಳಗಾವಿಯಲ್ಲೇ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ, ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಯೋಜನೆ ಬಗ್ಗೆ ಮಾಹಿತಿ ಪಡೆದು ಅದನ್ನು ತಡೆಯಲು ಕ್ರಮ ವಹಿಸುತ್ತೇನೆ ಎಂದಿದ್ದರು. ಇದಕ್ಕೆ ಉದ್ಧವ್ ಠಾಕ್ರೆ ಬಣದ ಪರಿಷತ್ ಸದಸ್ಯೆ ಡಾ.ಮನಿಷಾ ಕಾಯಂದೆ, ಮಹಾರಾಷ್ಟ್ರದ ವಿಧಾನ ಪರಿಷತ್ ಕಲಾಪದಲ್ಲಿ ಕರ್ನಾಟಕ ಸಿಎಂಗೆ ಅಪಮಾನ ಮಾಡಿದ್ದಾರೆ. ಕರ್ನಾಟಕದ ಗಡಿಭಾಗದ 865 ಹಳ್ಳಿಗಳಿಗೆ 54 ಕೋಟಿ ವೆಚ್ಚದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ಘೋಷಿಸಿದೆ. ಈ ಯೋಜನೆ ತಡೆಯಲು ಕ್ರಮ ಕೈಗೊಳ್ತೀವಿ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಮಹಾರಾಷ್ಟ್ರ ವಿಧಾನ ಪರಿಷತ್ ಕಲಾಪದಲ್ಲಿ ಚರ್ಚೆಯಾಗಿದೆ. ಈ ವೇಳೆ ಡಾ.ಮನಿಷಾ ಕಾಯಂದೆ ಉದ್ಧಟತನ ಪ್ರದರ್ಶಿಸಿದ್ದಾರೆ. ಕರ್ನಾಟಕ ಸಿಎಂ, ಕರ್ನಾಟಕ ಸರ್ಕಾರ ಬಗ್ಗೆ ಡಾ.ಮನಿಷಾ ಕಾಯಂದೆ ಹಗುರವಾದ ಮಾತು ಆಡಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ಸಿಎಂ ದಾದಾಗಿರಿ ಹೆಚ್ಚಾಗಿದೆ. ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿ, ಮರಾಠಿ ಮಾತನಾಡಲು ಬಿಡುತ್ತಿಲ್ಲ. ಉಭಯ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಇದೆ. ಕರ್ನಾಟಕ ಸಿಎಂಗೆ ಎಷ್ಟು ಧೈರ್ಯ ಇದೆ? ನಾವು ನಮ್ಮ ಜನರಿಗೆ ಅನುದಾನ ನೀಡುತ್ತಿದ್ದೇವೆ. ಇನ್ನು ಸುಪ್ರೀಂಕೋರ್ಟ್ ನಲ್ಲಿ ಕೇಸ್ ಪೆಂಡಿಂಗ್ ಇದೆ. ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ತಕ್ಕ ಉತ್ತರ ನೀಡಬೇಕೆಂದ ಎಂಎಲ್‌ಸಿ ಡಾ.ಮನಿಷಾ ಉದ್ಧಟತನ ಪ್ರದರ್ಶಿಸಿದ್ದಾರೆ.
ಮಹಾರಾಷ್ಟ್ರ ಪರಿಷತ್ ಕಲಾಪದಲ್ಲಿ ಕರ್ನಾಟಕ ಸಿಎಂಗೆ ಅಪಮಾನ ಎಸಗಿದ ಮಹಾರಾಷ್ಟ್ರದ ವಿಪಕ್ಷ ನಾಯಕರಿಗೆ ರಾಜ್ಯ ಕಾಂಗ್ರೆಸ್ ಬುದ್ದಿ ಹೇಳುತ್ತಾ ಎಂಬುದು ಪ್ರಶ್ನೆಯಾಗಿದೆ. ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಜನರಿಗೆ ಯೋಜನೆ ಘೋಷಣೆಗೆ ಡಿಕೆಶಿ ಕಿಡಿಕಾರಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿದ್ದರು. ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ ಎಂದೂ ಕಿಡಿ ಕಾರಿದ್ದರು. ಈಗ ಮಹಾರಾಷ್ಟ್ರದ ವಿಪಕ್ಷ ಸದಸ್ಯೆಯಿಂದ ಕರ್ನಾಟಕ ಸಿಎಂಗೆ ಅಪಮಾನವಾಗಿದೆ. ಅಲ್ಲಿಯ ತಮ್ಮ ಮಿತ್ರ ಪಕ್ಷಗಳಿಗೆ ಡಿಕೆಶಿ ಬುದ್ದಿ ಹೇಳ್ತಾರಾ ಎಂಬ ಬಗ್ಗೆ ಚರ್ಚೆಗಳು ಗರಿಗೆದರಿವೆ. ಇನ್ನು ಮನಿಷಾ ಉದ್ಧಟತನಕ್ಕೆ ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆ ನೀಡಿದ್ದರು. ಹೀಗಿದ್ದರೂ ಮಹಾ ಸಿಎಂ ಏಕನಾಥ ಶಿಂಧೆ ತನ್ನ ಚಾಳಿ ಮುಂದುವರೆಸಿದ್ದಾರೆ. ಮಹಾರಾಷ್ಟ್ರದ ವಿವಾದಾತ್ಮಕ ನಿರ್ಧಾರವನ್ನು ಕೇಂದ್ರದ ಗಮನಕ್ಕೆ ರಾಜ್ಯದ ಮುಖ್ಯಮಂತ್ರಿಗಳು ತರಬೇಕು. ಮನಿಷಾ ಆಡಿರುವ ಮಾತುಗಳನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ನಾಯಿ ಬಾಲ ಡೊಂಕೆ ಎಂಬ ನಾಣ್ಣುಡಿಯಂತೆ ಮಹಾರಾಷ್ಟ್ರ ನಾಯಕರು ಗಡಿ ವಿಚಾರದಲ್ಲಿ ವರ್ತಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಕೂಟದ ನೇತೃತ್ವ ವಹಿಸಿರುವ ಏಕನಾಥ ಶಿಂಧೆಗೆ ಮೂಗುದಾರ ಹಾಕುವ ಕೆಲಸವನ್ನು ಕೇಂದ್ರ ಬಿಜೆಪಿ ನಾಯಕರು ಮಾಡಬೇಕಿದೆ.