*ಕಿಣಯೇ ಡ್ಯಾಂ* ಗೆ ಜಲಸಂಪನ್ಮೂಲ ಸಚಿವರ ಭೇಟಿ ; ಭೂಸ್ವಾಧೀನಕ್ಕೆ ಅನುದಾನದ ಅಡಚಣೆ ಇಲ್ಲ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಕಾಮಗಾರಿ ಮುಕ್ತಾಯಗೊಳಿಸಲು ಸೂಚನೆ.
ಬೆಳಗಾವಿ ಗ್ರಾಮೀಣ ಭಾಗಕ್ಕೆ ನೀರು ಕೊಡುವ ಉದ್ದೇಶದಿಂದ ನಿರ್ಮಾಣ ಮಾಡುತ್ತಿರುವ *ಕಿಣಯೇ ಡ್ಯಾಂ* ಕಾಮಗಾರಿಯನ್ನು ಇನ್ನು ಒಂದು ತಿಂಗಳ ಕಾಲಮಿತಿಯೊಳಗೆ ಮುಕ್ತಾಯಗೊಳಿಸುವಂತೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಯವರು ತಿಳಿಸಿದರು.
ಇಂದು ಕಿಣಯೇ ಡ್ಯಾಂ ಕಾಮಗಾರಿ ವೀಕ್ಷಿಸಿ, *ಪ್ರಗತಿ ಪರಿಶೀಲನಾ ಸಭೆ* ನಡೆಸಿದ ಸಚಿವರು, ಕರ್ನಾಟಕ ನೀರಾವರಿ ನಿಗಮವು ಈ ಡ್ಯಾಂ ಕಾಮಗಾರಿ ಕೈಗೆತ್ತಿಕೊಂಡಿದೆ. ಡ್ಯಾಂ ವ್ಯಾಪ್ತಿಯಲ್ಲಿ ಎರಡು ಕಾಲುವೆಗಳನ್ನು ನಿರ್ಮಿಸಲಾಗುತ್ತಿದೆ. ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ನಿರ್ಮಾಣ ಮತ್ತು ಭೂಸ್ವಾಧೀನಕ್ಕೆ 78 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ.
ಬರುವ ಮಳೆಗಾಲದ ಒಳಗೆ ಡ್ಯಾಂ ಕಾಮಗಾರಿಯನ್ನು ಮುಗಿಸಬೇಕು ಎಂದು ಮುಖ್ಯ ಅಭಿಯಂತರರಿಗೆ ಸೂಚಿಸಿದರು.
*ಕಿಣಯೇ ಡ್ಯಾಂ* ವ್ಯಾಪ್ತಿಯಲ್ಲಿ 10 ಕಿ.ಮೀ ಉದ್ದದ ಎರಡು ಕಾಲುವೆ ನಿರ್ಮಿಸಲಾಗುತ್ತಿದೆ. ಬಲದಂಡೆಯ ಕಾಲುವೆ 6 ಕಿ.ಮೀ ವ್ಯಾಪ್ತಿ ಹೊಂದಿದ್ದು, ಕಿಣಯೇ, ರಣಕುಂಡೆ, ಸಂತಿಬಸ್ತವಾಡ, ವಾಘವಾಡೆ ಗ್ರಾಮಗಳ 2300 ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಎಡದಂಡೆ ಕಾಲುವೆ 4 ಕಿ.ಮೀ ವ್ಯಾಪ್ತಿ ಹೊಂದಿದ್ದು, ಕಿಣಯೇ ಮತ್ತು ಬಾದರವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 700 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಿದೆ ಎಂದು ಸಚಿವರು ತಿಳಿಸಿದರು.
*ಭೂಸ್ವಾಧೀನ ಪ್ರಕ್ರಿಯೆ ಚುರುಕು ಗೊಳಿಸಿ.*
ಒಂದು ಕಾಲುವೆ ವಾಘವಾಡೆ ಗ್ರಾಮದ ಕೆರೆಗೆ ಮುಕ್ತಾಯವಾಗಲಿದ್ದು, ಇನ್ನೊಂದು ಕಾಲುವೆ ಬಾದರವಾಡಿ ಗ್ರಾಮದ ಕೆರೆ ಪ್ರದೇಶ ಮುಟ್ಟಲಿದೆ. ಈ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕಾಗಿ ನಡೆಯಬೇಕು ಎಂದು ಸಚಿವರು ಸೂಚಿಸಿದರು. ಭೂ ಸ್ವಾಧೀನಕ್ಕೆ ಅನುದಾನದ ಅಡಚಣೆ ಇಲ್ಲ. ರೈತರ ಮನವಿಯಂತೆ ಅಗತ್ಯವಿರುವ ಕಡೆ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಸಚಿವರು ಸೂಚಿಸಿದರು.
*ಹೊಸ ಕಾಮಗಾರಿ; ಡಿಪಿಆರ್ ಸಿದ್ಧಪಡಿಸಲು ಸೂಚನೆ:*
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪರಿಶೀಲಿಸಿದ ಸಚಿವರು ಜಿಲ್ಲೆಯಲ್ಲಿ ಹೊಸದಾಗಿ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಚುರುಕಿನಿಂದ ಕೆಲಸ ಮಾಡುವಂತೆ ಸಚಿವರು ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅರವಿಂದ್ ಕಣಗಿಲ್ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.