Breaking News

ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಎಷ್ಟು ಕೋಟಿ ಹಣ ಸೀಜ್ ಆಗಿದೆ ಗೊತ್ತಾ??

ವಿಧಾನಸಭೆ ಚುನಾವಣಾ ವೆಚ್ಚ ವೀಕ್ಷಕರ ಸಭೆ
———————————————————-
ಚುನಾವಣಾ ಅಕ್ರಮಗಳ ಮೇಲೆ ಹದ್ದಿನಕಣ್ಣು;
“ನ್ಯಾಯಸಮ್ಮತ ಚುನಾವಣೆ-ನಮ್ಮ ಜವಾಬ್ದಾರಿ”

ಬೆಳಗಾವಿ, ಏ.15(ಕರ್ನಾಟಕ ವಾರ್ತೆ): ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಗೆ ನಿಯೋಜಿತಗೊಂಡಿರುವ ಎಲ್ಲ 18 ಮತಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಸುವರ್ಣ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶನಿವಾರ (ಏ.15) ಸಭೆ ನಡೆಯಿತು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವೆಚ್ಚ ವೀಕ್ಷಕ ಸುಬೋಧ ಸಿಂಗ್ ಮಾತನಾಡಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಿಯೋಜಿಸಲಾಗಿರುವ ವಿವಿಧ ತಂಡಗಳು ಮತ್ತಷ್ಟು ಚುರುಕಿನಿಂದ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆದಾಯ ತೆರಿಗೆ, ರೈಲ್ವೆ, ಅಬಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ವಿವಿಧ ಮತಕ್ಷೇತ್ರಗಳ ವೆಚ್ಚ ವೀಕ್ಷಕರು ಮಾತನಾಡಿ, ಚುನಾವಣಾ ಅಕ್ರಮ ಮತ್ತು ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂದೇಹಾಸ್ಪದ ಡಿಜಿಟಲ್ ಹಣಕಾಸು ವ್ಯವಹಾರಗಳ ಕುರಿತು ನಿಗಾವಹಿಸಬೇಕು. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚುನಾವಣಾಧಿಕಾರಿಗಳು ಹಾಗೂ ವೀಕ್ಷಕರಿಗೆ ಒದಗಿಸಬೇಕು ಎಂದು ತಿಳಿಸಿದರು.

ಚುನಾವಣಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ-ಜಿಲ್ಲಾಧಿಕಾರಿ ನಿತೇಶ್ ಪಾಟೀಲ:

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನಿಷ್ಪಕ್ಷಪಾತ ರೀತಿಯಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ರಚಿಸಲಾಗಿರುವ ವಿವಿಧ ತಂಡಗಳು, ಚೆಕ್ ಪೋಸ್ಟ್, ಇದುವರೆಗೆ ವಶಪಡಿಸಿಕೊಳ್ಳಲಾಗಿರುವ ವಸ್ತುಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ನೀಡಿದರು.

ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಒಟ್ಟಾರೆ 58 ಎಫ್.ಎಸ್.ಟಿ., 66 ಎಸ್.ಎಸ್.ಟಿ.; 18 ವಿ.ವಿ.ಟಿ ಹಾಗೂ 51 ವಿಡಿಯೋ ಸರ್ವೇಲನ್ಸ್ ತಂಡಗಳನ್ನು ರಚಿಸಲಾಗಿದೆ. ಈ ಎಲ್ಲ ತಂಡಗಳು ಮಾದರಿ ನೀತಿಸಂಹಿತೆ ಜಾರಿಗೆ ಬಂದ ದಿನದಿಂದಲೇ ಕಾರ್ಯಪ್ರವೃತ್ತಗೊಂಡಿವೆ.

11.50 ಕೋಟಿ ನಗದು ವಶ:

ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಒಟ್ಟು 11,50,91,970 ನಗದು ಹಾಗೂ 53.67 ಲಕ್ಷ ರೂಪಾಯಿ ಮೊತ್ತದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಮಾದರಿ ನೀತಿಸಂಹಿತೆ ಮುಂಚೆಯಿಂದ ಹಿಡಿದು ಇಲ್ಲಿಯವರೆಗೆ ನಗದು, ವಾಹನ ಹಾಗೂ ಇತರೆ ವಸ್ತುಗಳು ಸೇರಿದಂತೆ ಒಟ್ಟಾರೆ 19 ಕೋಟಿ ರೂಪಾಯಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕೀಮ್ ಆ್ಯಪ್ ಮೂಲಕ ಪ್ರತಿಯೊಂದು ಹಣ ಸಾಗಾಣಿಕೆಗಳ ಮೇಲೆ ನಿಗಾ ವಹಿಸಲಾಗಿದೆ.

2217 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್:

ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ 2217 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಮತಗಟ್ಟೆಯ ಸೂಕ್ಷ್ಮತೆ ಆಧರಿಸಿ ಹದಿನೆಂಟು ಮತಕ್ಷೇತ್ರಗಳಿಂದ 2217 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡು ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

ಸಶಸ್ತ್ರ ಸೀಮಾ ಬಲದ 11 ಕಂಪೆನಿಗಳು ಈಗಾಗಲೇ ಜಿಲ್ಲೆಗೆ ಆಗಮಿಸಿದ್ದು, ಮತದಾರರಲ್ಲಿ ವಿಶ್ಚಾಸ ಮೂಡಿಸಲು ಪಥಸಂಚಲನ ಕೈಗೊಳ್ಳಲಾಗಿರುತ್ತದೆ‌.
ಜಿಲ್ಲೆಯಲ್ಲಿ ಒಟ್ಟಾರೆ 4434 ಮತಗಟ್ಟೆಗಳಿದ್ದು, ಏಪ್ರಿಲ್ 10 ಕ್ಕೆ ಸ್ವೀಕೃತವಾದ ಅರ್ಜಿಗಳ ಪ್ರಕಾರ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.

ಬೆಳಗಾವಿ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿದ್ದು, ಹದಿನೆಂಟು ಮತಕ್ಷೇತ್ರಗಳನ್ನು ಒಳಗೊಡಿರುತ್ತದೆ. ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮೂರು ಮತಕ್ಷೇತ್ರಗಳು ಮತ್ತು ಯಮಕನಮರಡಿ ಕ್ಷೇತ್ರದ ಭಾಗಶಃ ಪ್ರದೇಶಗಳು ಬರುತ್ತವೆ.
ಸಂಬಂಧಿಸಿದ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಜತೆ ಸಮನ್ವಯಕ್ಕಾಗಿ ತಲಾ ಒಬ್ಬ ಎಸಿಪಿ ಗಳನ್ನು ನಿಯೋಜಿಸಲಾಗಿದೆ.

ಚೆಕ್‌ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, 21 ಅಂತರರಾಜ್ಯ ಚೆಕ್ ಪೋಸ್ಟ್, 22 ಅಂತರ ಜಿಲ್ಲಾ ಚೆಕ್ ಪೋಸ್ಟ್ ಮತ್ತು 12 ಜಿಲ್ಲೆಗೊಳಗೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ಎಲ್ಲ ಚೆಕ್ ಪೋಸ್ಟ್ ಗಳಲ್ಲೂ ತೀವ್ರ ನಿಗಾ ವಹಿಸಲಾಗಿದ್ದು, ಇದುವರೆಗೆ ಗಮನಾರ್ಹ ಪ್ರಮಾಣದಲ್ಲಿ ದಾಖಲೆರಹಿತ ನಗದು, ಅಕ್ರಮ ವಸ್ತುಗಳು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ವಿವರಿಸಿದರು.
ಅಕ್ರಮಗಳನ್ನು ತಡೆಗಟ್ಟುವ ದೃಷ್ಟಿಯಿಂದ ಬಲ್ಕ್ ಕೊರಿಯರ್ ಹಾಗೂ ಪೆಟ್ರೋಲ್ ಬಂಕ್ ಗಳ ಮೇಲೆ ನಿಗಾವಹಿಸಲಾಗಿದ್ದು, ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದರು.

ಸೂಕ್ಷ್ಮ ಮತ್ತು ದುರ್ಬಲ ವರ್ಗ ಹೆಚ್ಚಾಗಿರುವ ಮತಗಟ್ಟೆಗಳಿಗೆ ಈಗಾಗಲೇ ಹಲವಾರು ಸುತ್ತು ಭೇಟಿ ನೀಡಿ ಜನರನ್ನು ವಿಶ್ವಾಸಕ್ಜೆ ತೆಗೆದುಕೊಳ್ಳಲಾಗಿದೆ ಎಂದು ಡಾ.ಸಂಜೀವ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ಹರ್ಷಲ್ ಭೋಯರ್, ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಶಿಂಧೆ, ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕರಾದ ರಾಜೇಶ್ ಕುಮಾರ್ ‌ಮೌರ್ಯ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
***

Check Also

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.