Breaking News

ಯಾರನ್ನೋ ಹೆದರಿಸಲು ನಾನು ಶಾಸಕನಾಗುತ್ತಿಲ್ಲ- ಬಾಲಚಂದ್ರ ಜಾರಕಿಹೊಳಿ.

ಗೋಕಾಕ : ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ ಶೇ 75-80 ರಷ್ಟು ಮತಗಳು ಬಿಜೆಪಿಗೆ ಮತ ಚಲಾಯಿಸುವಂತೆ ಮಾಡಿದರೆ ಮಾತ್ರ ನಮ್ಮ ಗೆಲುವಿನ ಗುರಿಯನ್ನು ತಲುಪಬಹುದು. ಈ ನಿಟ್ಟಿನಲ್ಲಿ ಮತಗಟ್ಟೆಗಳ ಪ್ರಮುಖರು ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ಬೀಳಲು ಶಕ್ತಿ ಮೀರಿ ಶ್ರಮಿಸುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಮಂಗಳವಾರ ಸಂಜೆ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಅರಭಾವಿ ಮತಕ್ಷೇತ್ರದ 281 ಮತಗಟ್ಟೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪಕ್ಷ ನೇಮಿಸಿರುವ ಮತಗಟ್ಟೆಗಳ ಪ್ರಮುಖರು ತಮ್ಮ ಪ್ರಾಮಾಣಿಕ ಸೇವೆಯನ್ನು ಮಾಡಬೇಕು. ಗೆಲುವಿಗೆ ಹಗಲಿರುಳು ದುಡಿಯುವಂತೆ ಅವರು ತಿಳಿಸಿದರು.

ಕ್ಷೇತ್ರದಲ್ಲಿ 1 ಪುರಸಭೆ, 3 ಪಟ್ಟಣ ಪಂಚಾಯತ ಹಾಗೂ 34 ಗ್ರಾಮ ಪಂಚಾಯತಗಳು ಸೇರಿ ಒಟ್ಟು 281 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ ಪಕ್ಷ ಶೇ 75-80 ರಷ್ಟು ಮತಗಳು ನಮಗೆ ಬೀಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕು. ಅಂದಾಗ ಮಾತ್ರ ನಾವು ಲಕ್ಷ ಮತಗಳ ಮುನ್ನಡೆಯ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಈ ಬಾರಿಯೂ ತಾಯಿ-ತಂದೆ, ದೇವರು ಹಾಗೂ ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಗೆಲ್ಲುತ್ತೇನೆ. ಇದನ್ನು ನಾನು ಪ್ರೀತಿಯಿಂದ ಹೇಳುತ್ತಿದ್ದೇನೆ. ಕಳೆದ ಕನಕ ಜಯಂತಿ ಕಾರ್ಯಕ್ರಮದಂದೇ ಈ ಮಾತನ್ನು ಹೇಳಿದ್ದೇನೆ. ಕಾರ್ಯಕರ್ತರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ ಜಯ ನಿಶ್ಚಯವಾಗಿದೆ. ಆದರೆ ಇಡೀ ರಾಜ್ಯವೇ ನಮ್ಮ ಅರಭಾವಿ ಕ್ಷೇತ್ರದತ್ತ ನೋಡುವಂತೆ ಮಾಡಲು ನಮ್ಮ ಗುರಿ ಲಕ್ಷ ಮತಗಳ ಮುನ್ನಡೆಯೊಂದಿಗೆ ನಾವು ನಡೆಯಬೇಕಿದೆ. ಇದನ್ನು ಸಾಕಾರಗೊಳಿಸಲು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ವೈಮನಸ್ಸನ್ನು ಮರೆತು ಈ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ಶ್ರಮಿಸುವಂತೆ ಅವರು ಹೇಳಿದರು.

ಕಳೆದ 19 ವರ್ಷಗಳಿಂದ ಅರಭಾವಿ ಕ್ಷೇತ್ರದಿಂದ ಸತತವಾಗಿ ಆಯ್ಕೆ ಮಾಡುತ್ತ ಬರುತ್ತಿದ್ದು ನಿಮ್ಮ ಪ್ರೀತಿ ವಿಶ್ವಾಸಗಳಿಗೆ ಸದಾ ಚಿರಋಣಿಯಾಗಿರುವೆ. ನಿಮ್ಮಂತಹ ಕಾರ್ಯಕರ್ತರನ್ನು ಪಡೆದಿರುವುದು ನನ್ನ ಸೌಭಾಗ್ಯ. ನಿಷ್ಠಾವಂತ ಕಾರ್ಯಕರ್ತರನ್ನು ಯಾವ ಸಂದರ್ಭದಲ್ಲೂ ಕಡೆಗಣಿಸುತ್ತಿಲ್ಲ. ಆದರೆ ನಮ್ಮಿಂದ ದೂರವಾದ ಕೆಲವರು ನಾನು ಆಯ್ಕೆಯಾದಾಗ ಮೊದಲು ಅವರೇ ಬಂದು ಮಾಲಾರ್ಪಣೆ ಮಾಡುತ್ತಾರೆ. ಇದು ನಿಷ್ಠಾವಂತರಿಗೆ ಸ್ವಲ್ಪ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ. ಈ ವಿಷಯವನ್ನು ಕೂಡ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಬರಲಿರುವ ಚುನಾವಣೆಯಲ್ಲಿ ನಮ್ಮನ್ನು ನಂಬಿರುವ ಕಾರ್ಯಕರ್ತರಿಗೆ ಯಾವುದೇ ಅನ್ಯಾಯ ಮಾಡುವುದಿಲ್ಲ. ಇದಕ್ಕಾಗಿಯೇ ಪ್ರತಿ ಬೂತ್ ಮಟ್ಟದಲ್ಲಿ ಕೆಲಸ ನಡೆಯಬೇಕಿದೆ. ನಮಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಳು ಬೀಳಬೇಕಾಗಿದೆ. ಇದೇ ಕಾರಣದಿಂದ ನಾನು ಒಂದು ತೀರ್ಮಾಣಕ್ಕೆ ಬಂದಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದ್ದು ಅಲ್ಲಿಂದ ಎರಡು ದಿನಗಳವರೆಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಮಾಲಾರ್ಪಣೆ ಮಾಡಿಸಿಕೊಳ್ಳುವುದಿಲ್ಲ. ಬೂತ್ ಮಟ್ಟದಲ್ಲಿ ಬಿಜೆಪಿಗೆ ಬಿದ್ದಿರುವ ಮತಗಳ ಆಧಾರದ ಮೇಲೆ ಕಾರ್ಯಕರ್ತರ ಶ್ರಮವನ್ನು ನೋಡಿಯೇ ಮಾಲಾರ್ಪಣೆ ಮಾಡಿಸಿಕೊಳ್ಳುತ್ತೇನೆ. ಇದರಿಂದ ನಿಷ್ಠಾವಂತರನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಯಾರನ್ನೋ ಹೆದರಿಸಲು ಶಾಸಕನಾಗುತ್ತಿಲ್ಲ. ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತ ಅವರ ಸುಖ ದುಃಖಗಳಲ್ಲಿ ಭಾಗಿಯಾಗುತ್ತ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಶಾಸಕನಾಗುತ್ತಿದ್ದೇನೆ. ಬೇರೆಯವರಂತೆ ಅಧಿಕಾರ ಚಲಾಯಿಸಲಿಕ್ಕೆ ನಾನು ಶಾಸಕನಾಗುತ್ತಿಲ್ಲ ಎಂದು ಹೇಳಿದರು.

ನಾಳೆಯಿಂದ 28 ರವರೆಗೆ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಚುನಾವಣೆಯ ಕೆಲಸವನ್ನು ಆರಂಭಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಾರ್ಥವಾಗಿ ರಾಯಬಾಗಕ್ಕೆ 29 ರಂದು ಆಗಮಿಸಲಿದ್ದು ಈ ಕಾರ್ಯಕ್ರಮದಲ್ಲಿ ಅರಭಾವಿ ಮತಕ್ಷೇತ್ರದಿಂದ ಸುಮಾರು 15 ಸಾವಿರ ಕಾರ್ಯಕರ್ತರು ಭಾಗಿಯಾಗುವರು. ದಿನಾಂಕ 30 ರಿಂದ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಿಜೆಪಿಗೆ ಅತ್ಯಧಿಕ ಮತಗಳು ಪ್ರಾಪ್ತಿಯಾಗಲು ದುಡಿಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತ ಬಂಧುಗಳಿಗೆ ಕರೆ ನೀಡಿದರು.

ಮಹಾರಾಷ್ಟ್ರದ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಗಿರೀಶ ಮಹಾಜನ, ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಹಾರಾಷ್ಟ್ರದ ಪವರಲೂಮ್ ನಿಗಮದ ಅಧ್ಯಕ್ಷ ಹಿಂದುರಾವ ಶಳಕೆ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಚುನಾವಣಾ ಪ್ರವಾಸಿ ಪ್ರಭಾರಿ ಮಹೇಶ ಜಾಧವ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ, ಹಿರಿಯ ಮುಖಂಡ ಅನಂತ ನಾಯಿಕ, ಜಿಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಭೀಮಶಿ ಮಗದುಮ್ಮ, ಪರಮೇಶ್ವರ ಹೊಸಮನಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ಮಹಾದೇವಪ್ಪ ಭೋವಿ, ಗಿರೀಶ ಹಳ್ಳೂರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಹಾದೇವಗೌಡ ಪಾಟೀಲ, ಎಚ್.ಡಿ. ಮುಲ್ಲಾ, ಲಾಲಸಾಬ ಸಿದ್ಧಾಪೂರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಜೆಜಿ ಕೋ ನಿರ್ದೇಶಕ ಶಿವನಗೌಡ ಪಾಟೀಲ, ಮುತ್ತೆಪ್ಪ ಮನ್ನಾಪೂರ, ಹನಮಂತ ತೇರದಾಳ, ನೀಲಪ್ಪ ಕೇವಟಿ, ವಿಸ್ತಾರಕ ವೆಂಕಟ ಲಾಳಿ, ರಮೇಶ ಸಣ್ಣಕ್ಕಿ, ಅಶೋಕ ಉದ್ದಪ್ಪನವರ, ಬಸವರಾಜ ಮಾಳೇದವರ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ಮಲೀಕ ಹುಣಶ್ಯಾಳ, ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಬಿಜೆಪಿ ಪದಾಧಿಕಾರಿಗಳು, ಕ್ಷೇತ್ರದ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಸ್ವಾಗತಿಸಿದರು. ಅರಭಾವಿ ಮಂಡಲ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಕುಡಚಿ ವಂದಿಸಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *