*ಬೆಳಗಾವಿಯಲ್ಲಿ ಬಹುದೊಡ್ಡ ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ..!*
ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಸೋನಟ್ಟಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ಅಡ್ಡೆ ಮೇಲೆ ಬೆಳ್ಳಂಬೆಳಿಗ್ಗೆ ಭರ್ಜರಿ ದಾಳಿ ನಡೆದಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 5 ಸಾವಿರ ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ.
ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ 200 ಜನ ಪೊಲೀಸ್ ಸಿಬ್ಬಂದಿಗಳ ತಂಡದಿಂದ ಈ ದೊಡ್ಡ ಕಾರ್ಯಾಚರಣೆ ನಡೆದಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ.
ದಾಳಿ ವೇಳೆ 200 ಲೀಟರ್ ಕಳ್ಳಬಟ್ಟಿ ಇರುವ 26 ಬಾರಲ್, 30 ಲೀಟರ್ 17 ಬಾರಲ್ ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆಯಲಾಗಿದೆ. ಅಂದಾಜು 12 ಲಕ್ಷ ರೂ. ಮೌಲ್ಯದ ಕಳ್ಳಬಟ್ಟಿ ಸಾರಾಯಿ ಇದಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವಿಚಾರಕ್ಕೆ ಪ್ರತಿಕ್ರಯಿಸಿರುವ ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಒಟ್ಟು 5700 ಲೀಟರ್ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದೆವೆ. ಕೆಲವು ಮನೆಗಳ ಮೇಲೂ ಸಹ ದಾಳಿ ಮಾಡಿ ಕಳ್ಳಬಟ್ಟಿ ವಶಕ್ಕೆ ಪಡೆಯಲಾಗಿದೆ. ಒಂದು ವಾರದ ಹಿಂದೆ ಬಂದ ಮಾಹಿತಿ ಆಧರಿಸಿ ಇಂದು ಕಾರ್ಯಾಚರಣೆ ನಡೆಸಿದ್ದೇವೆ. ಪೊಲೀಸರು ಬಂದ ತಕ್ಷಣ ಎಲ್ಲರೂ ಓಡಿ ಹೋಗಿದ್ದಾರೆ. ಒಬ್ಬ ಆರೋಪಿ ಮಾತ್ರ ಸಿಕ್ಕಿ ಬಿದ್ದಿದ್ದಾನೆ. ಕೆಲವು ದಿನಗಳಿಂದ ಇಲ್ಲಿ ದಂಧೆ ನಡೆಯುತ್ತಿದೆ. ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.