ಬೆಳಗಾವಿ- ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ ಆದರೂ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ಪರ್ವ ಆರಂಭವಾಗಿದೆ.
ಖಾನಾಪೂರ ಕ್ಷೇತ್ರದ ಮಾಜಿ ಎಂಈಎಸ್ ಶಾಸಕ ಅರವಿಂದ್ ಪಾಟೀಲ ನಾಡವಿರೋಧಿ ಎಂಈಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಕಾರಣ ಖಾನಾಪೂರ ಕ್ಷೇತ್ರದಲ್ಲಿ ಎಂಈಎಸ್ ಈಗ ಸಂಪೂರ್ಣವಾಗಿ ಕಂಗಾಲಾಗಿದ್ದು ಈ ಕ್ಷೇತ್ರದಲ್ಲಿ ಎಂಈಎಸ್ ಸಂಘಟನೆಯೇ ಸಮಾಧಿಯಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಅರವಿಂದ ಪಾಟೀಲ ಎಂಈಎಸ್ ನಿಂದ ಸ್ಪರ್ದೆ ಮಾಡಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಕಾಂಗ್ರೆಸ್ಸಿನಿಂದ ಅಂಜಲಿ ನಿಂಬಾಳ್ಕರ್ ಗೆದ್ದು ಈ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು.
ಕಳೆದ ಬಾರಿ ಎಂಈಎಸ್ ನಿಂದ ಅರವಿಂದ ಪಾಟೀಲ ಮತ್ತು ಇನ್ನೊಬ್ಬ ಅಭ್ಯರ್ಥಿ ಸೇರಿದಂತೆ ಇಬ್ಬರು ಅಭ್ಯರ್ಥಿಗಳು ಸ್ಪರ್ದೆ ಮಾಡಿದ ಕಾರಣ,ಮರಾಠಾ ಸಮುದಾಯದ ಮತಗಳು ಎಂಈಎಸ್ ಮತ್ತು ಬಿಜೆಪಿಯಲ್ಲಿ ವಿಭಜನೆಯಾಗಿ ಕಾಂಗ್ರೆಸ್ಸಿಗೆ ಇದರ ಲಾಭವಾಗಿತ್ತು.
ಆದ್ರೆ ಖಾನಾಪೂರ ಕ್ಷೇತ್ರದ ಪರಿಸ್ಥಿತಿಯನ್ನು ಅವಲೋಕಿಸಿದ ಅರವಿಂದ್ ಪಾಟೀಲ,ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಎಂಈಎಸ್ ಗೆ ಕೈಕೊಟ್ಟು ಬಿಜೆಪಿಗೆ ಜಂಪ್ ಮಾಡಿರುವದರಿಂದ ಈಗ ಕಾಂಗ್ರೆಸ್ ವಲಯದಲ್ಲೂ ತಳಮಳ ಶುರುವಾಗಿದ್ದು,ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಈ ನಿರೀಕ್ಷಿತ ರಾಜಕೀಯ ಬೆಳವಣಿಗೆ ಎಚ್ಚರಿಕೆಯ ಘಂಟೆಯಾಗಿದ್ದು, ಶಾಸಕಿ ಅಂಜಲಿ ನಿಂಬಾಳ್ಕರ್ ಕಾಲಿಗೆ ಚಕ್ರ ಕಟ್ಟಿಕೊಂಡು ಖಾನಾಪೂರ ಕ್ಷೇತ್ರದಲ್ಲಿ ಓಡಾಡುವದು ಅನಿವಾರ್ಯವಾಗಿದೆ.
ಮಾಜಿ ಶಾಸಕ ಅರವಿಂದ್ ಪಾಟೀಲ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ನೇತ್ರತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಅವರ ಸಮ್ಮುಖದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ಹದಿನೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಈ ಜಿಲ್ಲೆಯಲ್ಲಿ ವರ್ಷ ಮೊದಲೇ ರಾಜಕೀಯ ಗುದ್ದಾಟ ಶುರುವಾಗಿದ್ದು, ಪಕ್ಷಾಂತರ ಪರ್ವಕ್ಕೆ ಅರವಿಂದ್ ಪಾಟೀಲ ಚಾಲನೆ ನೀಡಿದ್ದಾರೆ.